ಶಿವಮೊಗ್ಗ: ಅನ್ಯಾಯದ ವಿರುದ್ಧ ಸಮ ಸಮಾಜದ ಹೋರಾಟವನ್ನು ತೀರ್ಥಹಳ್ಳಿಯಿಂದಲೇ ಪ್ರಾರಂಭ ಮಾಡುತ್ತೇವೆ. ಕರ್ನಾಟಕದ ಏಳಿಗೆಗೋಸ್ಕರ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಸಲುವಾಗಿ ಎಲ್ಲರ ಜೊತೆ ಸೇರಿ ಚರ್ಚಿಸಲಿದ್ದೇವೆ ಎಂದು ನಟ ಚೇತನ್ ಹೇಳಿದ್ದಾರೆ.
ಸಮ ಸಮಾಜ ಸಂಘಟನೆ ವತಿಯಿಂದ ತೀರ್ಥಹಳ್ಳಿಯಲ್ಲಿ 140ನೇ ಸಭೆಯನ್ನು ಮಾಡಲಾಗಿದ್ದು, ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಚೇತನ್, ಶಿವಮೊಗ್ಗ ಜಿಲ್ಲೆ ಹೋರಾಟದ ಭೂಮಿ ಕಾಗೋಡು ಚಳುವಳಿ ಮುಂತಾದ ಅನೇಕ ಹೋರಾಟಗಳು ಇಲ್ಲಿಂದಲೇ ಪ್ರಾರಂಭವಾಗಿವೆ. ಇಂತಹ ಸಂದರ್ಭದಲ್ಲಿ ಧರ್ಮಸ್ಥಳದ ವಿಚಾರದಲ್ಲಿ ಬಹಳ ದೊಡ್ಡ ನ್ಯಾಯ ಸಿಗಬೇಕು. ಇಲ್ಲಿರುವ ಸಮಾಜಮುಖಿ ಚಿಂತಕರು ಹೋರಾಟಗಾರರು ಸಮಾನಮನಸ್ಕರನ್ನು ಸೇರಿಸಿ ಸಭೆ ಮಾಡುತ್ತಿದ್ದೇವೆ ನಂತರ ಸಾಗರ ಸೊರಬ ಶಿಕಾರಪುರದಲ್ಲೂ ಕೂಡ ಸಭೆ ನಡೆಸಲಿದ್ದೇವೆ ಎಂದು ಹೇಳಿದ್ದಾರೆ.
2000 ದಿಂದ 2018ರವರೆಗೂ ಪೊಲೀಸರು ಎಷ್ಟೊಂದು ಅಸಹಜವಾಗಿ ಸಾವನ್ನಪ್ಪಿದ ಶವಗಳ ದಾಖಲಾತಿಗಳನ್ನು ಅಳಿಸಿ ಹಾಕಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ಇದೆಲ್ಲದರ ಹಿನ್ನೆಲೆಯಲ್ಲಿ ಅಲ್ಲಿ ನಡೆಯಬಾರದ ಘಟನೆಗಳು ನಡೆದಿದೆ ಎನ್ನುವುದು ಖಚಿತವಾಗುತ್ತಿದೆ. ಎಸ್ಐಟಿ ತನಿಖೆ ಮುಂದುವರಿಸಬೇಕು ನ್ಯಾಯ ಸಿಗಬೇಕು. ನಾವು ಯಾವ ದೇವಸ್ಥಾನದ ವಿರುದ್ಧವೂ ಅಲ್ಲ, ಧರ್ಮದ ವಿರುದ್ಧವೂ ಅಲ್ಲ, ಎಲ್ಲಾ ಧರ್ಮದವರು ನಮ್ಮ ಮೇಲೆ ನಂಬಿಕೆ ಇರುವವರು ನಮ್ಮ ಜೊತೆ ಸೇರಿದ್ದಾರೆ ಎಂದಿದ್ದಾರೆ.
ಧರ್ಮಸ್ಥಳ ಎಂಬ ಊರಿನಲ್ಲಿ ಆಗಿರುವ ಅಸಹಜ ಸಾವಿಗೆ ನ್ಯಾಯ ಸಿಗಬೇಕು ಈ ವಿಚಾರದಲ್ಲಿ ಧರ್ಮಸ್ಥಳದ ಭಕ್ತರು ಕೂಡ ಪಾಲ್ಗೊಂಡಿದ್ದಾರೆ. ಎಲ್ಲಾ ಧರ್ಮದವರು ಕೂಡ ಇದ್ದಾರೆ ಇದು ಕೇವಲ ಒಂದು ಧರ್ಮದ ಒಂದು ಸಿದ್ಧಾಂತದ ಹೋರಾಟ ಅಲ್ಲ, ಕರ್ನಾಟಕ ರಾಜ್ಯಾದ್ಯಂತ ನಾಯಕನಾಗಿ ಹೋರಾಟ ಮಾಡುತ್ತಿದ್ದೇವೆ. ಎಸ್ ಐ ಟಿ ರವರು ಈ ತನಿಖೆಯಲ್ಲಿ ಉತ್ತಮವಾಗಿ ಕೆಲಸ ಮಾಡಬೇಕು. ಬಿಜೆಪಿಯವರು ಹೋರಾಟ ಮಾಡಲಿ, ಬಿಜೆಪಿಯವರು ಹೇಳಿದ ತಕ್ಷಣ ಯಾವುದು ಸತ್ಯ ಎಂಬುದಲ್ಲ. ಬಿಜೆಪಿಯವರು ತಮ್ಮ ಅಸ್ತಿತ್ವವನ್ನು ಬೆಳೆಸಿಕೊಳ್ಳುವುದಕ್ಕಾಗಿ ಮತ್ತು ತಮ್ಮ ನಾಯಕತ್ವದ ಅಸ್ತಿತ್ವಕ್ಕಾಗಿ ಹೋರಾಟ ಮಾಡುತ್ತಿರಬಹುದು ಎಂದು ಹೇಳಿದ್ದಾರೆ.
ಬಿಜೆಪಿಗೆ ವೋಟ್ ಹಾಕಿರುವ ಆರ್ ಎಸ್ ಎಸ್ ಪರವಾಗಿರುವವರು ಕೂಡ ನಮ್ಮ ಸಮ ಸಮಾಜದ ಜೊತೆಗೆ ಇದ್ದಾರೆ. ಮುಖ್ಯವಾಗಿ ಧರ್ಮಸ್ಥಳ ಊರಿನಲ್ಲಿ ಆಗಿರುವ ಅನ್ಯಾಯದ ವಿರುದ್ಧ ನ್ಯಾಯ ಸಿಗಬೇಕು. ಕರ್ನಾಟಕದಲ್ಲಿ ನ್ಯಾಯಕ್ಕಾಗಿ ಒಟ್ಟಾಗಿದ್ದಾರೆ ಎಂದು ತಿಳಿಸಿದ್ದಾರೆ.



















