ಉಡುಪಿ: ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ತೇಜೋವಧೆ ಮಾಡಿದ ಆರೋಪದ ಮೇಲೆ ಮಹೇಶ ಶೆಟ್ಟಿ ತಿಮರೋಡಿ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆ. 16 ರಂದು ಫೇಸ್ ಬುಕ್ ಪೇಜ್ ವೊಂದರಲ್ಲಿ ವೀಡಿಯೋ ಮಾಡಿ ಪಕ್ಷದ ಹಿರಿಯರು, ಹಿಂದೂ ಧರ್ಮದ ನಾಯಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಹೇಳನ ಮಾಡಿ ಬೇರೆ ಬೇರೆ ಧರ್ಮಗಳ ಹಾಗೂ ಸಮುದಾಯದ ನಡುವೆ ವೈಮನಸ್ಸಿನ ದ್ವೇಷ ಭಾವನೆಯನ್ನು ಉಂಟು ಮಾಡಿರುವ ಮಹೇಶ ಶೆಟ್ಟಿ ತಿಮರೋಡಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಉಡುಪಿ ಗ್ರಾಮಾಂತರ ಬಿಜಿಪಿಯ ಮಂಡಳಾಧ್ಯಕ್ಷ ರಾಜೀವ ಕುಲಾಲ್ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತಿಮರೋಡಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 196 (1),352, 353(2) ಅಡಿಯಲ್ಲಿ ಮಹೇಶ ಶೆಟ್ಟಿ ತಿಮರೋಡಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
“ಕೋಟ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲು !”
ಧರ್ಮಸ್ಥಳ ಕ್ಷೇತ್ರದ ಮ್ಯಾಪ್‌ನ್ನು ಅಳವಡಿಸಿ ಅಲ್ಲಿರುವ ದೇವಸ್ಥಾನ ಹಾಗೂ ಮಸೀದಿಗಳ ಬಗ್ಗೆ ಕೋಟ ವಸಂತ ಗಿಳಿಯಾರ್ ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ವೊಂದನ್ನು ಹಾಕಿ ಧರ್ಮ – ಧರ್ಮಗಳ ಮಧ್ಯೆ ಎತ್ತಿಕಟ್ಟಿ ಕೋಮು ಗಲಭೆ ಸೃಷಿಸುವ ಪ್ರಚೋದನಕಾರಿ ಸಂದೇಶ ಪೋಸ್ಟ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಕೆಂಪು ಮತ್ತು ನೀಲಿ ಬಣ್ಣದಲ್ಲಿ ಗುರುತು ಮಾಡಿದ ನಕ್ಷೆಯನ್ನು ಕೂಡ ಪ್ರಸಾರ ಮಾಡಿದ್ದಾರೆ. ಹೀಗಾಗಿ, ಮಂಗಳೂರಿನ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಗಿಳಿಯಾರ್ ವಿರುದ್ಧ ಪ್ರಕರಣ ದಾಖಲಾಗಿದೆ. ಇದೇ ಪೇಸ್‌ಬುಕ್ ಪೋಸ್ಟ್ ಅನ್ನು ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶರತ್ ಶೆಟ್ಟಿ, ವಡ್ಡರ್ಸೆ ಎನ್ನುವವರು ರೀ ಪೊಸ್ಟ್ ಮಾಡಿದ್ದು ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ 96(1) (a), 353(2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.