ಮಂಗಳೂರು: ಧರ್ಮಸ್ಥಳ ಪ್ರಕರಣಲ್ಲಿ ಸುಳ್ಳು ಹೇಳಿದ್ದಾರೆ ಎಂಬ ಶಂಕೆಯಿಂದ ಎಸ್ ಐಟಿ ತನಿಖೆ ನಡೆಸುತ್ತಿದ್ದು, ಇಂದು(ಸೋಮವಾರ) ಬೆಳಗ್ಗೆ ಬೆಳ್ತಂಗಡಿಯ ಉಜಿರೆಯಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿ ನಿವಾಸಕ್ಕೆ “ದೂರುದಾರ ಆರೋಪಿ” ಚಿನ್ನಯ್ಯನಿಗೆ ಆಶ್ರಯ ಕೊಟ್ಟ ಹಿನ್ನೆಲೆ ದಾಳಿ ನಡೆಸಿದೆ.
ಮಹೇಶ್ ಶೆಟ್ಟಿ ತಿಮರೋಡಿ ಮನೆಯ ಶೋಧಕ್ಕೆ ಸರ್ಚ್ ವಾರಂಟ್ (ನ್ಯಾಯಾಲಯದ ಅನುಮತಿ) ಪಡೆದ ಎಸ್ ಐ ಟಿ, ಆರೋಪಿ ಚಿನ್ನಯ್ಯನನ್ನು ಕರೆದುಕೊಂಡು ತಿಮರೋಡಿ ಮನೆಗೆ ಮಹಜರು ನಡೆಸಿ ತೀವ್ರ ಶೋಧ ನಡೆಸಿದೆ.
ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಆವರ ಸಹೋದರ ಮೋಹನ್ ಕುಮಾರ್ ಶೆಟ್ಟಿ ಮನೆಯಲ್ಲಿ ಕೂಡಾ ಎಸ್ ಐಟಿ ತನಿಖೆ ನಡೆಸುತ್ತಿದೆ. ಜಿತೇಂದ್ರ ದಯಾಮ ಸೇರಿದಂತೆ ಹಲವು ಅಧಿಕಾರಿಗಳ ತಂಡ ಕೆಲಸ ಮಾಡುತ್ತಿದೆ. ಚಿನ್ನಯ್ಯನ 25 ವಿಡಿಯೋಗಳನ್ನು ಮಾಡಲಾಗಿದೆ. ಈಗಾಗಲೆ 3 ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ.
ಚಿನ್ನಯ್ಯನ ಮೊಬೈಲ್ ಗಾಗಿ ತಿಮರೋಡಿ ಮನೆಯಲ್ಲಿ ಶೋಧ ನಡೆದಿದ್ದು, ಆತನ ಬಳಸುತ್ತಿದ್ದ ಮೊಬೈಲ್ ತಿಮರೋಡಿ ಅವರ ಮನೆಯಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ತಿಮರೋಡಿ ಮನೆಯಲ್ಲಿ ಚಿನ್ನಯ್ಯನಿಗೆ ಆಶ್ರಯ ನೀಡಿದ ಶಂಕೆ ಇದ್ದು, ಈತ ಇದೇ ಮನೆಯಿಂದ ಹಲವು ಯೂಟ್ಯೂಬ್ ಚಾನೆಲ್ ಗಳಿಗೆ ಸಂದರ್ಶನ ನೀಡಿದ್ದಾನೆ ಎನ್ನಲಾಗಿದೆ.