ಮಂಗಳೂರು: ಧರ್ಮಸ್ಥಳ ಬೆಳವಣಿಗೆಗೆ ಸಂಬಂಧಿಸಿದಂತೆ ಸಾಕ್ಷಿ ದೂರುದಾರ ಗುರುತಿಸಿದ್ದ 13ನೇ ಸ್ಥಳದಲ್ಲಿಉತ್ಖನನ ಕಾರ್ಯ ನಡೆದಿದ್ದು, ಯಾವುದೇ ಅಸ್ಥಿ ಅವಶೇಷಗಳು ಪತ್ತೆಯಾಗಿಲ್ಲ.
ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸಮೀಪದ ಅಣೆಕಟ್ಟೆಯ ಪಕ್ಕದ ಬಯಲಿನ ಈ ಜಾಗದಲ್ಲಿ ‘ಅನೇಕ ಮೃತದೇಹಗಳನ್ನು ಹೂತಿದ್ದೆ’ ಎಂದು ಪ್ರಕರಣದ ಸಾಕ್ಷಿ ದೂರುದಾರ ತಿಳಿಸಿದ್ದ. ಹಾಗಾಗಿ ಇಲ್ಲಿ ಎಸ್.ಐ.ಟಿ ಉತ್ಖನನ ಕಾರ್ಯ ತೀವ್ರ ಕುತೂಹಲ ಸೃಷ್ಟಿಸಿತ್ತು.
ಇಲ್ಲಿ ಅಣೆಕಟ್ಟೆ ಹಾಗೂ ರಸ್ತೆ ನಿರ್ಮಿಸುವಾಗ 10 ಅಡಿಗಳಷ್ಟು ಮಣ್ಣು ಹಾಕಿ ನೆಲವನ್ನು ಎತ್ತರಿಸಲಾಗಿತ್ತು. ಹಾಗಾಗಿ ನೆಲ ಅಗೆಯಲು ಸಣ್ಣ ಮತ್ತು ದೊಡ್ಡ ಯಂತ್ರ ಬಳಸಿ 15ರಿಂದ 20 ಅಡಿ ಆಳದವರೆಗೆ ಅಗೆಯಲಾಯಿತು. ಯಾವುದೇ ಕುರುಹೂ ಪತ್ತೆಯಾಗಿಲಿಲ್ಲ. ಸಾಕ್ಷಿ ದೂರುದಾರ ಸ್ಥಳದಲ್ಲಿಯೇ ಇದ್ದು ಎಲ್ಲಿ ಅಗೆದರೆ ಮೃತದೇಹದ ಕುರುಹು ಸಿಗಬಹುದು ಎಂದು ಆತನೇ ಗುರುತಿಸುತ್ತಿದ್ದ.
ಸ್ಥಳಕ್ಕೆ ಭೇಟಿ ನೀಡಿದ್ದ ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಶೋಧ ಕಾರ್ಯಾಚರಣೆಗೆ ಮಾರ್ಗದರ್ಶನ ಮಾಡಿದರು. ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್, ಎಸ್‌ಐಟಿ ಎಸ್.ಪಿಗಳಾದ ಜಿತೇಂದ್ರ ಕುಮಾರ್ ದಯಾಮ, ಸಿ.ಎ.ಸೈಮನ್ ಅವರು ಸ್ಥಳದಲ್ಲಿದ್ದರು.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳೂ ಉತ್ಖನನ ಕಾರ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು.
ಇದುವರೆಗೆ, ಶೋಧ ಕಾರ್ಯಾಚರಣೆಯನ್ನು ಮಾಧ್ಯಮದವರು ಚಿತ್ರೀಕರಿಸುವುದನ್ನು ತಡೆಯಲು ಆ ಸ್ಥಳದ ಸುತ್ತ ಹಸಿರು ಬಣ್ಣದ ಪರದೆ ಕಟ್ಟಲಾಗುತ್ತಿತ್ತು. ಆದರೆ 13ನೇ ಸ್ಥಳದಲ್ಲಿ ಉತ್ಖನನ ಕಾರ್ಯವನ್ನು ದೂರದಿಂದ ಚಿತ್ರೀಕರಿಸಲು ಅವಕಾಶ ಕಲ್ಪಿಸಲಾಗಿತ್ತು.
ಸಾಕ್ಷಿ ದೂರುದಾರ ಮೃತದೇಹಗಳನ್ನು ಹೂತಿರುವುದಾಗಿ ಹೇಳಿ, ಇದುವರೆಗೆ 17 ಸ್ಥಳಗಳನ್ನು ಗುರುತಿಸಿದ್ದು, ಅವುಗಳಲ್ಲಿ ಎರಡು ಕಡೆ ಮೃತದೇಹಗಳ ಅವಶೇಷಗಳು ಪತ್ತೆಯಾಗಿವೆ.



















