ಬೆಂಗಳೂರು : ಶಾಸಕಾಂಗ ಪಕ್ಷದ ಸಭೆಯಲ್ಲಿ ಧರ್ಮಸ್ಥಳ ಪ್ರಕರಣ ಪ್ರಸ್ತಾಪ ವಿಚಾರಕ್ಕೆ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಗೋಪಾಲಕೃಷ್ಣ, ಧರ್ಮಸ್ಥಳದಲ್ಲಿ ಸೌಜನ್ಯ ಪ್ರಕರಣ ವಿವಾದ ಸೃಷ್ಟಿ ಮಾಡಿತ್ತು. ಅಂದಿನಿಂದಲೂ ಪರ ವಿರೋಧ ಚರ್ಚೆಯಾಗಿತ್ತು. ಈಗ ಅನಾಮಿಕ ಸಾಕ್ಷಿ ದೂರುದಾರ ಧರ್ಮಸ್ಥಳದ ಆಸುಪಾಸಿನಲ್ಲಿ ಅಸಹಜ ಸಾವಿಗೀಡಾದ ಶವಗಳನ್ನು ಹೂತಿರುವುದಾಗಿ ದೂರು ನೀಡಿದ್ದಾನೆ. ಸರ್ಕಾರವೂ ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ರಚನೆಯಾಗಬೇಕೆಂಬ ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ ಎಸ್.ಐಟಿ ರಚಿಸಿದ್ದೇವೆ. ಬಿಜೆಪಿಯವರು ಸುಖಾಸುಮ್ಮನೆ ಈ ಪ್ರಕರಣಕ್ಕೆ ʼಹಿಂದುತ್ವʼ ಎನ್ನುತ್ತಾರೆ. ಅವರಿಗಿಂತ ಹಿಂದೂ ಧರ್ಮವನ್ನು ನಾವು ಆಚರಿಸುತ್ತೇವೆ ಎಂದು ಕಿಡಿ ಕಾರಿದ್ದಾರೆ.
ಅನಾಮಿಕ ಸಾಕ್ಷಿ ದೂರುದಾರ ನೀಡಿರುವ ದೂರಿನ ಆಧಾರದ ಮೇಲೆ ಎಸ್.ಐ.ಟಿ ತನಿಖೆ ನಡೆಸುತ್ತಿದೆ. ಆತ ತೋರಿಸಿರುವ ಸ್ಥಳಗಳಲ್ಲಿ ಉತ್ಖನನ ಕಾರ್ಯ ನಡೆಸಲಾಗುತ್ತಿದೆ. ಬಿಜೆಪಿ ನಾಯಕರು ಹೇಳುತ್ತಾರೆ ಎಂದಮಾತ್ರಕ್ಕೆ ಮಧ್ಯಂತರ ವರದಿ ನೀಡುವುದಕ್ಕೆ ಸಾಧ್ಯವಿಲ್ಲ. ತನಿಖೆ ಪೂರ್ಣಗೊಂಡ ಬಳಿಕ ಸಿಎಂಗೆ ಎಸ್.ಐ.ಟಿ ತಂಡ ವರದಿ ಒಪ್ಪಿಸುತ್ತದೆ. ಮೊದಲು ತನಿಖೆ ಪೂರ್ಣಗೊಳ್ಳಲಿ. ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಕೆಲವರು ಗೊಂದಲ ಸೃಷ್ಟಿಸುತ್ತಿದ್ದಾರೆ. ಬಿಜೆಪಿಯವರು ಸುಖಾಸುಮ್ಮನೆ ಗೊಂದಲ ಸೃಷ್ಟಿಸುವುದನ್ನು ನಿಲ್ಲಿಸಬೇಕೆಂದು ಅವರು ಹೇಳಿದ್ದಾರೆ.