ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಧರ್ಮಸ್ಥಳ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದ ಸಸಿಕಾಂತ್ ಸೆಂಥಿಲ್ ಅವರ ವಿರುದ್ಧ ಬಿಜೆಪಿ ನಾಯಕರು ಮಾಡಿರುವ ಗಂಭೀರ ಆರೋಪಗಳಿಗೆ ಸೆಂಥಿಲ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಶಾಸಕ ಜನಾರ್ದನ ರೆಡ್ಡಿ ಸೇರಿದಂತೆ ಹಲವು ಬಿಜೆಪಿ ನಾಯಕರು, “ಧರ್ಮಸ್ಥಳ ಪ್ರಕರಣದ ಸಂಚು ರೂಪಿಸಿರುವ ಪ್ರಮುಖ ಮಾಸ್ಟರ್‌ಮೈಂಡ್ ಸಸಿಕಾಂತ್ ಸೆಂಥಿಲ್” ಎಂದು ಆರೋಪಿಸಿದ್ದರು.
“ಇದು ಸಂಪೂರ್ಣ ಆಧಾರರಹಿತ ಮತ್ತು ರಾಜಕೀಯ ಪ್ರೇರಿತ. ಯಾವುದೇ ಆಧಾರವಿಲ್ಲದ ಸುಳ್ಳು ಆರೋಪಗಳ ವಿರುದ್ಧ ನಾನು ಕಾನೂನು ಹೋರಾಟ ನಡೆಸಲು ಸಜ್ಜಾಗಿದ್ದೇನೆ” ಎಂದು ಸೆಂಥಿಲ್ ಅವರು ಹೇಳಿದ್ದಾರೆ.
ವಾಟ್ಸ್ಯಾಪ್ ವರದಿಗಳನ್ನು ನೋಡಿಕೊಂಡು ಮಾತನಾಡುತ್ತಿದ್ದಾರೆ. ನನ್ನ ಮೇಲೆ ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ. ನನ್ನ ಮೇಲೆ ಆರೋಪ ಮಾಡುತ್ತಿರುವವರ ವಿರುದ್ಧ ದೂರು ದಾಖಲಿಸಿದ್ದೇನೆ ಎಂದು ಅವರು ಹೇಳಿದ್ದಾರೆ.
ನನ್ನ ಮೇಲೆ ಆರೋಪ ಮಾಡುತ್ತಿರುವವವರು “ಪ್ರಾಪರ್ಟಿಗಳನ್ನು ಮಿಸ್ಯೂಸ್” ಮಾಡಿಕೊಂಡವರು. ಬುರುಡೆ ಎಲ್ಲಿಂದ ಬಂತು ಎನ್ನುವುದರ ಬಗ್ಗೆ ನನಗೆ ಗೊತ್ತಿಲ್ಲ. ಜನಾರ್ಧನ್ ರೆಡ್ಡಿ ಅವರಿಗೆ ಗೊತ್ತಿರಬಹುದು ಎಂದು ಆಕ್ರೋಶ ಹೊರ ಹಾಕಿದ್ದಲ್ಲದೇ, ಧರ್ಮಸ್ಥಳದ ಬಗ್ಗೆ ತನಿಖೆ ನಡೆಯುತ್ತಿದೆ. ಹಾಗಾಗಿ ಧರ್ಮಸ್ಥಳದ ಬಗ್ಗೆ ಸದ್ಯ ನಾನು ಪ್ರತಿಕ್ರಿಯಿಸುವುದಿಲ್ಲ ಎಂದಿದ್ದಾರೆ.