ಬೆಂಗಳೂರು : ಧರ್ಮಸ್ಥಳ ಪ್ರಕರಣದ ತನಿಖೆಯ ನಡುವೆ ಗುಂಪು ಘರ್ಷಣೆ ನಡೆದ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಪರಮೇಶ್ವರ್, ನಿನ್ನೆ ಗುಂಪು ಸಂಘರ್ಷ ನಡೆದಿದೆ. ಯಾಕೆಂದು ತಿಳಿದಿಲ್ಲ. ಎಸ್ಐಟಿ ರಚನೆಗೆ ಒತ್ತಾಯ ಕೇಳಿಬಂದಾಗ ಎಚ್ಚರಿಕೆಯಿಂದ ಪರಿಶೀಲಿಸಿ ಎಸ್ಐಟಿ ರಚಿಸಿದ್ದೆವು. ದೂರುದಾರ ವ್ಯಕ್ತಿಯ ಆರೋಪದ ಆಧಾರದ ಮೇಲೆ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಒಂದು ಸ್ಥಳದಲ್ಲಿ ಅಸ್ತಿಪಂಜರದ ಅವಶೇಷಗಳು ಪತ್ತೆಯಾಗಿವೆ. ಇದರ ಹಿನ್ನೆಲೆಯಲ್ಲಿ ಅಥವಾ ಅದಕ್ಕೆ ಸಂಬಂಧಿಸಿದಂತೆ ಘರ್ಷಣೆ ಆಗಿದೆ. ಪ್ರಕರಣ ದಾಖಲಾಗಿದೆ. ಪ್ರತಿ ಪ್ರಕರಣವೂ ದಾಖಲಾಗಿದೆ. ತನಿಖೆಗೆ ಅಡ್ಡಿಯಾಗದಂತೆ ಕ್ರಮ ವಹಿಸುತ್ತೇವೆ ಎಂದು ಹೇಳಿದ್ದಾರೆ.
ಎಲ್ಲವನ್ನೂ ಪರಿಶೀಲಿಸಿ ತನಿಖೆ ನಡೆಸಲಾಗುತ್ತದೆ. ತನಿಖೆಯ ಬಳಿಕ ಯಾವ ರೀತಿ ಎಸ್ಐಟಿ ಮತ್ತು ಸ್ಥಳೀಯ ಪೊಲೀಸರು ಸೂಕ್ತ ಕ್ರಮ ವಹಿಸುತ್ತಾರೆ. ಯಾರು ಏನು ಹೇಳಿಕೆ ನೀಡುತ್ತಾರೆ ಎನ್ನುವುದು ಮುಖ್ಯವಲ್ಲ. ಸತ್ಯ ಹೊರಗೆ ಬರಬೇಕು ಎನ್ನುವುದು ಮುಖ್ಯ. ಈಗಲೇ ಎಸ್ಐಟಿ ತಂಡವನ್ನು ಪ್ರಶ್ನೆ ಮಾಡುವುದು ಸೂಕ್ತವಲ್ಲ.
ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎನ್ನುವುದು ಸರಿಯಲ್ಲ. ಆರೋಪಗಳನ್ನು ಮಾಡುತ್ತಾರೆ. ಎಲ್ಲವನ್ನೂ ಇವರೇ ಹೇಳುತ್ತಾರೆ. ನಮ್ಮಲ್ಲಿ ಪೊಲೀಸ್ ಇಲಾಖೆ ಸಮರ್ಥವಾಗಿದೆ. ಎಲ್ಲಾ ರೀತಿಯಲ್ಲೂ ತನಿಖೆ ನಡೆಯುತ್ತದೆ. ಅದರಲ್ಲಿ ಸಂಶಯವಿಲ್ಲ. ಅಸ್ತಿಪಂಜರಗಳ ಅವಶೇಷಗಳು ಪತ್ತೆಯಾಗಿರುವುದರ ಬಗ್ಗೆ ಮುಂದಿನ ಪ್ರಕ್ರಿಯೆಗಳನ್ನು ಎಸ್ಐಟಿ ಅಧಿಕಾರಿಗಳು ವಹಿಸಿಕೊಳ್ಳುತ್ತಾರೆ ಎಂದಿದ್ದಾರೆ.