ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಮಿಕನಾಗಿ 1995 ರಿಂದ 2014ರ ವರೆಗೆ ಕೆಲಸ ಮಾಡುತ್ತಿದ್ದಾಗ ಅನೇಕ ಶವಗಳನ್ನು ಹೂತಿದ್ದೇನೆ ಎಂದು ಹೇಳಿದ್ದ ವ್ಯಕ್ತಿಯು ಇಂದು(ಜು.11) ಬೆಳ್ತಂಗಡಿಯ ನ್ಯಾಯಾಲಯಕ್ಕೆ ಹಾಜರಾಗಿದ್ದು, ಸುಮಾರು 1 ಗಂಟೆ 20 ನಿಮಿಷ ಆತ ಹೇಳಿಕೆ ನೀಡಿದ್ದಾನೆ ಎಂದು ತಿಳಿದು ಬಂದಿದೆ.
ಧರ್ಮಸ್ಥಳದಲ್ಲಿ ನಡೆದ ಸರಣಿ ಅತ್ಯಾಚಾರ ಕೊಲೆಗಳ ಸಾಕ್ಷಿ ನಾಶ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದ ವ್ಯಕ್ತಿ ಪೊಲೀಸ್ ರಕ್ಷಣೆಯೊಂದಿಗೆ ಬೆಳ್ತಂಗಡಿ ಕೋರ್ಟ್‌ಗೆ ಹಾಜರಾಗಿದ್ದರು. ಭಾರತೀಯ ನಾಗರಿಕ ಸುರಕ್ಷಾ ಸಂಹಿತ (BNSS) ನ ಸೆಕ್ಷನ್ 183 ರ ಅಡಿಯಲ್ಲಿ ಬೆಳ್ತಂಗಡಿ ತಾಲೂಕಿನ ಪ್ರಧಾನ ಸಿವಿಲ್ ನ್ಯಾಯಾಧೀಶರ ಮುಂದೆ ತನ್ನ ಹೇಳಿಕೆಯನ್ನು ದಾಖಲಿಸಿದ್ದಾನೆ.
ನ್ಯಾಯಾಲಯಕ್ಕೆ ಬರುವಾಗ ಕೈಯಲ್ಲಿ ಕಪ್ಪು ಬ್ಯಾಗ್ ಕಾಣಿಸಿಕೊಂಡಿದ್ದು, ಕುತೂಹಲಕ್ಕೆ ಎಡೆ ಮಾಡಿಕೊಟ್ಟಿತ್ತು. ಸದ್ಯ ತಿಳಿದು ಬಂದಿರುವ ಮಾಹಿತಿಯ ಪ್ರಕಾರ, ತಾನು ದೂರಿನಲ್ಲಿ ಉಲ್ಲೇಖಿಸಿದ್ದ ಶವದ ಅಸ್ಥಿಪಂಜರವನ್ನು ನ್ಯಾಯಾಧೀಶರಿಗೆ ತೋರಿಸಲು ತಂದಿದ್ದ ಎಂದು ತಿಳಿದು ಬಂದಿದೆ. ಅಲ್ಲದೇ, ಈ ಅಸ್ಥಿಪಂಜರವನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾನೆ.