ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ದ ನಡೆಯುತ್ತಿರುವ ಅಪಪ್ರಚಾರಗಳನ್ನು, ಷಡ್ಯಂತ್ರಗಳನ್ನು ಖಂಡಿಸಿ ರಾಜ್ಯ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿರುವ ‘ಧರ್ಮಸ್ಥಳ ಚಲೋ’ ಬೃಹತ್ ಸಮಾವೇಶದ ಸಭಾ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚಾಲನೆ ನೀಡಿದರು.
ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಹ್ಲಾದ್ ಜೋಶಿ, ಕ್ಷೇತ್ರದ ಧರ್ಮಾಧಿಕಾರಿಯೊಂದಿಗೆ ಇಡೀ ದೇಶವಿದೆ, ಮೋದಿ ಸರಕಾರವೇ ಇದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಹಿಂದೂ ಸಮಾಜವನ್ನು ಒಡೆಯುವ ಕಾರ್ಯವನ್ನು ಸದಾ ಮಾಡುತ್ತಾ ಬಂದಿದೆ. ರಾಜ್ಯದಲ್ಲಿಯೂ ಇದೇ ತಂತ್ರಗಾರಿಕೆಯನ್ನು ಅನುಸರಿಸುತ್ತಿದೆ. ಧರ್ಮಸ್ಥಳದ ವಿರುದ್ದ ದೊಡ್ಡ ಷಡ್ಯಂತ್ರ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಈ ದೇಶದ ಬಹುಸಂಖ್ಯಾತ ಸಮುದಾಯದ ವಿರುದ್ಧ ಕಾಂಗ್ರೆಸ್ ಸದಾ ಷಡ್ಯಂತ್ರ ಮಾಡಿದೆ. ಅದರ ಭಾಗವಾಗಿ ಧರ್ಮಸ್ಥಳದಲ್ಲಿಯೂ ನಡೆದಿದೆ ಎಂದು ಜೋಶಿ ಗಂಭೀರ ಆರೋಪ ಮಾಡಿದ್ದಾರೆ.
ಸಮಾವೇಶದ ಅಧ್ಯಕ್ಷತೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಹಿಸಿದ್ದರು.
ಕಾರ್ಯಕ್ರಮದಲ್ಲಿ ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ, ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ, ಸಂಸದ ಕ್ಯಾ. ಬ್ರಿಜೇಶ್ ಚೌಟ ಸೇರಿ ಬಿಜೆಪಿ ಸಂಸದರು, ಶಾಸಕರುಗಳು ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿಗಳಾಗಿದ್ದಾರೆ.