ನವದೆಹಲಿ: ಮುಂಬರುವ 2026ರ ಟಿ20 ವಿಶ್ವಕಪ್‌ಗೆ ಟೀಮ್ ಇಂಡಿಯಾ ಅತಿ ನೆಚ್ಚಿನ ತಂಡವಾಗಿ ಕಣಕ್ಕಿಳಿಯುತ್ತಿದ್ದರೂ, ತಂಡದ ಸಂಯೋಜನೆಯಲ್ಲಿ ಎದುರಾಗಲಿರುವ ಒಂದು ಪ್ರಮುಖ ಸವಾಲನ್ನು ಮಾಜಿ ನಾಯಕ ರೋಹಿತ್ ಶರ್ಮಾ ಎತ್ತಿ ತೋರಿಸಿದ್ದಾರೆ.
ಪ್ರಸ್ತುತ ವಿಶ್ವದ ನಂ.1 ಟಿ20 ತಂಡವಾಗಿರುವ ಭಾರತಕ್ಕೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ‘ಸ್ಪಿನ್ ಕಾಂಬಿನೇಷನ್’ ನಿರ್ಧರಿಸುವುದು ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಕೋಚ್ ಗೌತಮ್ ಗಂಭೀರ್ ಅವರಿಗೆ ಕಠಿಣ ಪರೀಕ್ಷೆಯಾಗಲಿದೆ ಎಂದು ರೋಹಿತ್ ಅಭಿಪ್ರಾಯಪಟ್ಟಿದ್ದಾರೆ.
ಈ ಸವಾಲಿನ ಬಗ್ಗೆ ವಿಸ್ತೃತವಾಗಿ ಮಾತನಾಡಿರುವ ರೋಹಿತ್, “ಕುಲದೀಪ್ ಯಾದವ್ ಮತ್ತು ವರುಣ್ ಚಕ್ರವರ್ತಿ ಅವರಂತಹ ಇಬ್ಬರು ಪರಿಣತ ಸ್ಪಿನ್ನರ್‌ಗಳನ್ನು ಒಟ್ಟಿಗೆ ಆಡಿಸುವುದು ತಂಡದ ಮುಂದಿರುವ ದೊಡ್ಡ ಸವಾಲು. ಈ ಇಬ್ಬರನ್ನೂ ತಂಡಕ್ಕೆ ಸೇರಿಸಿಕೊಳ್ಳಬೇಕೆಂದರೆ, ಕೇವಲ ಇಬ್ಬರು ವೇಗಿಗಳೊಂದಿಗೆ ಕಣಕ್ಕಿಳಿಯಬೇಕಾಗುತ್ತದೆ. ಇದು ತಂಡದ ಸಮತೋಲನದ ಮೇಲೆ ಪರಿಣಾಮ ಬೀರಬಹುದು,” ಎಂದು ಎಚ್ಚರಿಸಿದ್ದಾರೆ. ಸದ್ಯ ಭಾರತ ತಂಡವು ವರುಣ್ ಚಕ್ರವರ್ತಿ, ಕುಲದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಅವರ ಸ್ಪಿನ್ ಮೇಲೆ ಹೆಚ್ಚಿನ ಅವಲಂಬನೆ ಹೊಂದಿದೆ.
ಇಬ್ಬನಿ ಎಫೆಕ್ಟ್
ಇದೇ ವೇಳೆ, ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಭಾರತದಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ‘ಇಬ್ಬನಿ’ (Dew factor) ಪ್ರಮುಖ ಪಾತ್ರ ವಹಿಸಲಿದೆ ಎಂಬ ಅಂಶವನ್ನು ರೋಹಿತ್ ನೆನಪಿಸಿದ್ದಾರೆ. ಚಳಿಗಾಲ ಮುಗಿದು ವಸಂತ ಕಾಲ ಆರಂಭವಾಗುವ ಈ ಸಮಯದಲ್ಲಿ ಭಾರತದ ಶೇ. 90-95 ರಷ್ಟು ಮೈದಾನಗಳಲ್ಲಿ ಸಂಜೆಯ ವೇಳೆ ಇಬ್ಬನಿ ಹೆಚ್ಚಿರುತ್ತದೆ. ಇಂತಹ ಸಂದರ್ಭದಲ್ಲಿ ಮೂವರು ಸ್ಪಿನ್ನರ್‌ಗಳನ್ನು ಆಡಿಸುವುದು ಅಪಾಯಕಾರಿಯಾಗಬಹುದು. ಒಂದು ವೇಳೆ ಮೂವರು ಸ್ಪಿನ್ನರ್‌ಗಳನ್ನು ಆಡಿಸಬೇಕೆಂದರೆ ಅರ್ಷ್‌ದೀಪ್ ಸಿಂಗ್ ಅವರಂತಹ ಪ್ರಮುಖ ವೇಗಿಯನ್ನು ಕೈಬಿಡಬೇಕಾಗುತ್ತದೆ, ಇದು ತಂಡಕ್ಕೆ ಮುಳುವಾಗುವ ಸಾಧ್ಯತೆಯಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.
ಭಾರತವು ಫೆಬ್ರವರಿ 7 ರಂದು ಅಮೆರಿಕ ವಿರುದ್ಧ ತನ್ನ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದ್ದು, ಮುಂಬೈ, ದೆಹಲಿ, ಅಹಮದಾಬಾದ್ ಮತ್ತು ಕೊಲಂಬೊಗಳಲ್ಲಿ ಪಂದ್ಯಗಳನ್ನು ಆಡಲಿದೆ. ಜಸ್ಪ್ರೀತ್ ಬುಮ್ರಾ ಜೊತೆಗೆ ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ಅವರಂತಹ ಆಲ್ ರೌಂಡರ್‌ಗಳು ವೇಗದ ಬೌಲಿಂಗ್ ಜವಾಬ್ದಾರಿಯನ್ನು ಹಂಚಿಕೊಳ್ಳಬೇಕಾಗಬಹುದು. ಅಂತಿಮವಾಗಿ ತಂಡದ ಮ್ಯಾನೇಜ್‌ಮೆಂಟ್ ಸ್ಪಿನ್ ಬಲದ ಮೇಲೆ ನಂಬಿಕೆ ಇಡುತ್ತದೆಯೇ ಅಥವಾ ಇಬ್ಬನಿಯ ಕಾರಣದಿಂದ ವೇಗಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ವಿಶಾಖಪಟ್ಟಣಂನಲ್ಲಿ ರಿಂಕು ಸಿಂಗ್ ಮಿಂಚಿನ ಫೀಲ್ಡಿಂಗ್ | ಅಜಿಂಕ್ಯ ರಹಾನೆ ದಾಖಲೆ ಸಮಗಟ್ಟಿದ ಯುವ ಪ್ರತಿಭೆ



















