ಮುಂಬಯಿ: ನೂತನ ಬಿಸಿಸಿಐ (BCCI) ಕಾರ್ಯದರ್ಶಿಯಾಗಿ ದೇವಜಿತ್ ಸೈಕಿಯಾ (Devjit Saikia) ಅವರು ನೇಮಕಗೊಂಡಿದ್ದಾರೆ. ಅವರು ಜಯ್ ಶಾ ಅವರ ಉತ್ತರಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಜಯ್ ಶಾ ಐಸಿಸಿ ಅಧ್ಯಕ್ಷರಾಗಿ ಹೋಗುವ ಹಿನ್ನೆಲೆಯಲ್ಲಿ ಆ ಸ್ಥಾನ ಖಾಲಿ ಉಳಿದಿತ್ತು.
ಇಂದು(ಭಾನುವಾರ) ನಡೆದ ಬಿಸಿಸಿಐ ವಿಶೇಷ ಸಾಮಾನ್ಯ ಸಭೆಯಯಲ್ಲಿ ದೇವಜಿತ್ ಸೈಕಿಯಾ ಹೆಸರನ್ನು ಅಧಿಕೃತವಾಗಿ ಪ್ರಕಟಿಸಲಾಯಿತು. ಖಜಾಂಚಿಯಾಗಿ ಪ್ರಭತೇಜ್ ಸಿಂಗ್ ಭಾಟಿಯಾ(Prabhtej Singh Bhatia) ಬಿಸಿಸಿಐ ಆಡಳಿತ ಮಂಡಳಿ ಸೇರಿಕೊಂಡರು.
ಡಿಸೆಂಬರ್ 1 ರಂದು ಐಸಿಸಿ ಅಧ್ಯಕ್ಷರಾಗಿ ಜಯ್ ಶಾ ಅಧಿಕಾರ ವಹಿಸಿಕೊಂಡ ನಂತರ ಬಿಸಿಸಿಐ ಕಾರ್ಯದರ್ಶಿ ಹುದ್ದೆ ಖಾಲಿಯಾಗಿತ್ತು. ಸೈಕಿಯಾ ಅವರನ್ನು ಹಂಗಾಮಿ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು. ಇದೀಗ ಪೂರ್ಣಾವಧಿ ಅಧಿಕಾರ ನೀಡಲಾಯಿತು.
56 ವರ್ಷದ ಸೈಕಿಯಾ ಮಾಜಿ ಕ್ರಿಕೆಟಿಗ. ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅಸ್ಸಾಂ ತಂಡದ ಪರ 4 ಪಂದ್ಯ ಆಡಿದ್ದಾರೆ. 53 ರನ್ ಬಾರಿಸಿ 9 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಕ್ರಿಕೆಟ್ ಬಳಿಕ ಸೈಕಿಯಾ 28 ನೇ ವಯಸ್ಸಿನಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದ್ದರು. ಗುವಾಹಟಿ ಹೈಕೋರ್ಟ್‌ನಲ್ಲಿ ವಕೀಲಿಕೆ ಮಾಡಿದ್ದರು.
ಬಿಸಿಸಿಐ ಇನ್ನಷ್ಟು ಶ್ರೀಮಂತ

ಕಳೆದ ವರ್ಷದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI Profit) ಆದಾಯದಲ್ಲಿ ಹೆಚ್ಚಳವಾಗಿತ್ತು. 4200 ಕೋಟಿ ರೂ. ಗಳು ಹೆಚ್ಚುವರಿಯಾಗಿ ಹರಿದು ಬಂದಿತ್ತು. ಒಟ್ಟಾರೆ 20,686 ಕೋಟಿ ರೂ. ಗಳ ಆದಾಯ ಬಂದಿತ್ತು. ಐಪಿಎಲ್ ಹಾಗೂ ದ್ವಿಪಕ್ಷೀಯ ಸರಣಿಗಳ ಮಾಧ್ಯಮ ಪ್ರಸಾರದ ಹಕ್ಕುಗಳಿಂದ ಬಿಸಿಸಿಐಗೆ ಹೆಚ್ಚಿನ ಆದಾಯ ಬಂದಿದೆ.
ಭಾರತವು ಕ್ರಿಕೆಟ್ ಪ್ರೇಮಿಗಳ ದೇಶ. ಕ್ರಿಕೆಟ್ ಅತಿ ಹೆಚ್ಚು ಮಾರುಕಟ್ಟೆ ಇರುವುದು ಭಾರತದಲ್ಲಿ ಹೀಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಗಳಿಸುವ ಆದಾಯದಲ್ಲಿ ಬಿಸಿಸಿಐ ದೊಡ್ಡ ಪಾಲು ಪಡೆಯುತ್ತದೆ. 2022ರ ಜೂನ್‌ನಲ್ಲಿ ಐದು ವರ್ಷಗಳ ಅವಧಿಗೆ ಐಪಿಎಲ್ ಮಾಧ್ಯಮ ಹಕ್ಕುಗಳನ್ನು 48,390 ಕೋಟಿ ರೂ. ಗಳಿಗೆ ಮಾರಾಟ ಮಾಡಿ ಇತಿಹಾಸ ನಿರ್ಮಿಸಿತ್ತು.
2024-25ರ ಆರ್ಥಿಕ ಸಾಲಿನಲ್ಲಿ ಬಿಸಿಸಿಐ 10,054 ಕೋಟಿ ರೂಪಾಯಿಗಳನ್ನು ಗಳಿಸುವ ನಿರೀಕ್ಷೆಯಿದೆ ಮತ್ತು ಒಟ್ಟು ಬಜೆಟ್ ವೆಚ್ಚವನ್ನು 2,348 ಕೋಟಿ ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ. ಬಿಸಿಸಿಐನ 38 ರಾಜ್ಯಗಳ ಕ್ರಿಕೆಟ್ ಮಂಡಳಿಗಳನ್ನು ಹೊಂದಿದ್ದು, ಇವುಗಳು ವಾರ್ಷಿಕ ಅನುದಾನವನ್ನು ಅವಲಂಬಿಸಿವೆ. ಬಿಸಿಸಿಐನ ದಾಖಲೆಗಳ ಪ್ರಕಾರ ರಾಜ್ಯದ ಪ್ರತಿಯೊಂದು ಕ್ರಿಕೆಟ್ ಮಂಡಳಿಯು ವಾರ್ಷಿಕವಾಗಿ ಸುಮಾರು 499 ಕೋಟಿ ರೂ. ಗಳನ್ನು ಪಡೆಯಲಿವೆ.