ಹೈದರಾಬಾದ್ : ಕನ್ನಡತಿ, ನಟಿ ರಶ್ಮಿಕಾ ಮಂದಣ್ಣ ಅವರೊಂದಿಗಿನ ನಿಶ್ಚಿತಾರ್ಥದ ವದಂತಿಗಳ ನಡುವೆಯೇ ನಟ ವಿಜಯ್ ದೇವರಕೊಂಡ ಅವರು ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ, ಅವರ ಒಂದು ಬೆರಳಲ್ಲಿ ಚಿನ್ನದ ಉಂಗುರ ಹೊಳೆಯುತ್ತಿದ್ದು, ಇದು ಅವರ ಎಂಗೇಜ್ಮೆಂಟ್ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡಿದೆ.
ಇತ್ತೀಚೆಗೆ ಕುಟುಂಬ ಸಮೇತರಾಗಿ ಶ್ರೀ ಸತ್ಯಸಾಯಿ ಬಾಬಾ ಅವರ ಮಹಾಸಮಾಧಿಗೆ ಭೇಟಿ ನೀಡಿದ್ದ ವಿಜಯ್, ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡರು. ಈ ವೇಳೆ ಹೂಗುಚ್ಛ ಸ್ವೀಕರಿಸುವಾಗ ಅವರ ಬೆರಳಿನಲ್ಲಿ ಒಂದು ಆಕರ್ಷಕ ಬ್ಯಾಂಡ್ ಮಾದರಿಯ ಉಂಗುರವಿತ್ತು. ಇದನ್ನು ಗಮನಿಸಿದ ಅಭಿಮಾನಿಗಳು, ಇದು ರಶ್ಮಿಕಾ ಅವರೊಂದಿಗಿನ ನಿಶ್ಚಿತಾರ್ಥದ ಉಂಗುರವೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆರಂಭಿಸಿದ್ದಾರೆ.
ನಿಶ್ಚಿತಾರ್ಥ ನಿಜ, ಮದುವೆ 2026ರಲ್ಲಿ? ವರದಿಗಳ ಪ್ರಕಾರ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ನಿಶ್ಚಿತಾರ್ಥ ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದಿದೆ. ಈ ಬಗ್ಗೆ ಜೋಡಿ ಇನ್ನೂ ಅಧಿಕೃತವಾಗಿ ತುಟಿ ಬಿಚ್ಚಿಲ್ಲವಾದರೂ, ವಿಜಯ್ ಅವರ ತಂಡವು ನಿಶ್ಚಿತಾರ್ಥದ ಸುದ್ದಿಯನ್ನು ಖಚಿತಪಡಿಸಿದೆ. ಅಲ್ಲದೆ, ಈ ಜೋಡಿ ಫೆಬ್ರವರಿ 2026 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗಿದೆ.
‘ಗೀತ ಗೋವಿಂದಂ’ ನಿಂದ ಶುರುವಾದ ಪ್ರೇಮಕಥೆ : ‘ಗೀತ ಗೋವಿಂದಂ’ (2018) ಮತ್ತು ‘ಡಿಯರ್ ಕಾಮ್ರೇಡ್’ (2019) ಚಿತ್ರಗಳಲ್ಲಿ ವಿಜಯ್ ಮತ್ತು ರಶ್ಮಿಕಾ ಜೋಡಿಯ ಕೆಮಿಸ್ಟ್ರಿ ಪ್ರೇಕ್ಷಕರ ಮನಗೆದ್ದಿತ್ತು. ಅಂದಿನಿಂದಲೇ ಇವರಿಬ್ಬರ ನಡುವೆ ಪ್ರೀತಿ ಮೂಡಿದೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ರಹಸ್ಯ ಪ್ರವಾಸಗಳು ಮತ್ತು ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ಈ ವದಂತಿಗಳಿಗೆ ಇನ್ನಷ್ಟು ರೆಕ್ಕೆಪುಕ್ಕ ಬಂದಿತ್ತು.
ಕಳೆದ ವರ್ಷ ‘ಪುಷ್ಪ 2’ ಪ್ರಚಾರದ ವೇಳೆ, “ಸಿನಿಮಾ ರಂಗದವರನ್ನೇ ಮದುವೆಯಾಗುತ್ತೀರಾ?” ಎಂಬ ಪ್ರಶ್ನೆಗೆ ರಶ್ಮಿಕಾ, “ಅದು ಎಲ್ಲರಿಗೂ ಗೊತ್ತಿರುವ ವಿಷಯ” ಎಂದು ನಾಚಿಕೆಯಿಂದ ಉತ್ತರಿಸಿದ್ದು, ಈ ಚರ್ಚೆಯನ್ನು ಮತ್ತಷ್ಟು ಹೆಚ್ಚಿಸಿತ್ತು.
ಸದ್ಯ ರಶ್ಮಿಕಾ ಮಂದಣ್ಣ ಅವರು ಆಯುಷ್ಮಾನ್ ಖುರಾನಾ, ನವಾಜುದ್ದೀನ್ ಸಿದ್ದಿಕಿ ಮತ್ತು ಪರೇಶ್ ರಾವಲ್ ಜೊತೆ ನಟಿಸಿರುವ ‘ತಮ್ಮಾ’ ಎಂಬ ಹಾರರ್-ಕಾಮಿಡಿ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ಚಿತ್ರ ಇದೇ ತಿಂಗಳ 21 ರಂದು ತೆರೆಗೆ ಬರಲಿದೆ. ಇತ್ತೀಚೆಗೆ ಗೌತಮ್ ತಿನ್ನಾನೂರಿ ನಿರ್ದೇಶನದ ಸ್ಪೈ ಥ್ರಿಲ್ಲರ್ ‘ಕಿಂಗ್‌ಡಮ್’ (2025) ಚಿತ್ರದಲ್ಲಿ ವಿಜಯ್ ದೇವರಕೊಂಡ ನಟಿಸಿದ್ದರು.