ಮುಂಬೈ : “ವಿದೇಶಕ್ಕೆ ಪ್ರಯಾಣಿಸಲೇಬೇಕೆಂದರೆ ಅದಕ್ಕೂ ಮುನ್ನ 60 ಕೋಟಿ ರೂಪಾಯಿಗಳನ್ನು ಠೇವಣಿ ಇಡಿ.” ಹೀಗೆಂದು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ದಂಪತಿಗೆ ಬಾಂಬೆ ಹೈಕೋರ್ಟ್ ನಿರ್ದೇಶನ ನೀಡಿದೆ.
60 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಹೊರಡಿಸಲಾಗಿರುವ ಲುಕ್ ಔಟ್ ಸುತ್ತೋಲೆಯನ್ನು (LOC) ರದ್ದುಗೊಳಿಸುವಂತೆ ಕೋರಿ ದಂಪತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ನೀಡಿದೆ. ವಂಚನೆ ಆರೋಪದ ಮೊತ್ತವು 60 ಕೋಟಿ ರೂಪಾಯಿ ಆಗಿರುವುದರಿಂದ, ದೇಶವನ್ನು ತೊರೆಯುವ ಮೊದಲು ಅರ್ಜಿದಾರರು ಅಷ್ಟೇ ಮೊತ್ತವನ್ನು ಠೇವಣಿ ಇಡಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ನಿರ್ದೇಶನವನ್ನು ಪಾಲಿಸಿದ ನಂತರವೇ ಮುಂದಿನ ವಿಚಾರಣೆ ನಡೆಯಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಏನಿದು ಪ್ರಕರಣ? ಉದ್ಯಮಿ ದೀಪಕ್ ಕೊಠಾರಿ ಎಂಬವರು ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ವಿರುದ್ಧ 60 ಕೋಟಿ ರೂಪಾಯಿ ವಂಚನೆ ಆರೋಪದ ಮೇಲೆ ದೂರು ದಾಖಲಿಸಿದ್ದರು. ಸಾಲ ಮತ್ತು ಹೂಡಿಕೆ ಒಪ್ಪಂದದ ಅಡಿಯಲ್ಲಿ ತಮಗೆ ವಂಚಿಸಲಾಗಿದೆ ಎಂದು ಅವರು ಆರೋಪಿಸಿದ್ದರು. ಈ ಪ್ರಕರಣವನ್ನು ಮುಂಬೈ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ (EOW) ತನಿಖೆ ನಡೆಸುತ್ತಿದ್ದು, ದಂಪತಿಗಳ ವಿರುದ್ಧ ಲುಕ್ ಔಟ್ ನೋಟಿಸ್ ಹೊರಡಿಸಿತ್ತು. ಈ ಸುತ್ತೋಲೆ ತಮ್ಮ ವಿದೇಶಿ ಪ್ರಯಾಣಕ್ಕೆ ಅಡ್ಡಿಯಾಗುತ್ತಿದೆ ಎಂದು ದಂಪತಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.
ಶಿಲ್ಪಾ ಶೆಟ್ಟಿ ಹೇಳಿಕೆ ದಾಖಲು : ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಕ್ಟೋಬರ್ 4 ರಂದು ಆರ್ಥಿಕ ಅಪರಾಧಗಳ ವಿಭಾಗದ (EOW) ತಂಡವು ಶಿಲ್ಪಾ ಶೆಟ್ಟಿ ಅವರ ನಿವಾಸಕ್ಕೆ ಭೇಟಿ ನೀಡಿ, ಸುಮಾರು ನಾಲ್ಕು ಗಂಟೆಗಳ ಕಾಲ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿತ್ತು. ತನಿಖೆಗೊಳಪಟ್ಟಿರುವ ‘ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್’ ಕಂಪನಿಯ ವ್ಯವಹಾರಗಳಲ್ಲಿ ತಾನು ಯಾವುದೇ ಸಕ್ರಿಯ ಪಾತ್ರ ವಹಿಸಿರಲಿಲ್ಲ ಎಂದು ಶಿಲ್ಪಾ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ. ತಾನು ಕೇವಲ ಸೆಲೆಬ್ರಿಟಿ ರಾಯಭಾರಿಯಾಗಿ ವೇದಿಕೆಯಲ್ಲಿ ಕಾಣಿಸಿಕೊಳ್ಳಲು ಶುಲ್ಕ ಪಡೆದಿದ್ದೇನೆ ಮತ್ತು ಕಂಪನಿಯ ಆರ್ಥಿಕ ಅಕ್ರಮಗಳ ಬಗ್ಗೆ ತನಗೆ ತಿಳಿದಿರಲಿಲ್ಲ ಎಂದು ಅವರು ಹೇಳಿಕೆ ನೀಡಿದ್ದಾರೆ.