ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿವೆ. ಈ ಮಧ್ಯೆ ಬೆಂಗಳೂರು ನಗರವೊಂದರಲ್ಲಿಯೇ 91 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ನಗರದಲ್ಲಿ ಡೆಂಘೀ ಪಾಸಿಟಿವ್ ಸಂಖ್ಯೆ 2,174ಕ್ಕೆ ಏರಿಕೆಯಾಗಿದೆ.
24 ಗಂಟೆಗಳಲ್ಲಿ 82 ಮಕ್ಕಳು ಡೆಂಗ್ಯೂ ಸೋಂಕಿಗೆ ತುತ್ತಾಗಿದ್ದಾರೆ. ಡೆಂಘೀ ಮಹಾಮಾರಿ ಶಿವಮೊಗ್ಗದಲ್ಲಿ ಕೂಡ ಹೆಚ್ಚಾಗಿದೆ. ಅದು ಪುಟಾಣಿಗಳನ್ನೇ ಬಲಿ ಪಡೆಯುತ್ತಿದೆ. ಹಾಸನ ಜಿಲ್ಲೆ ಬಳಿಕ ಶಿವಮೊಗ್ಗದಲ್ಲಿ ಮಹಿಳೆಯೊಬ್ಬರು ಡೆಂಗ್ಯೂಗೆ ಬಲಿಯಾಗಿದ್ದಾರೆ. ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ನಿವಾಸಿ ರಶ್ಮಿ ಮೃತ ದುರ್ದೈವಿ. ಕಳೆದ 15 ದಿನದಿಂದ ತೀವ್ರ ಜ್ವರದಿಂದ ನರಳುತ್ತಿದ್ದರು. ಆದರೆ, ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಡೆಂಗ್ಯೂ ಸರ್ಕಾರವನ್ನೂ ನಡುಗುವಂತೆ ಮಾಡಿದೆ. ಹೀಗಾಗಿ ಐಎಎಸ್ ಅಧಿಕಾರಿಗಳಿಗೆ ಬಿಸಿಮುಟ್ಟಿಸಿದ್ದ ಸಿಎಂ ಸಿದ್ದರಾಮಯ್ಯ, ಮಂಗಳವಾರ ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಮಳೆಗಾಲದಲ್ಲೇ ಡೆಂಗ್ಯೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ನೀರು ನಿಲ್ಲದಂತೆ ಸ್ವಚ್ಛತೆಗೆ ಆದ್ಯತೆ ನೀಡುವುದು, ಸೊಳ್ಳೆಗಳ ನಾಶಕ್ಕೆ ಕಠಿಣ ಕ್ರಮ ಕೈಗೊಳ್ಳುವಂತೆ ಸಿಎಂ ಸೂಚಿಸಿದ್ದಾರೆ. ಪ್ರತಿ ಜಿಲ್ಲೆಯಲ್ಲಿ 10 ಪ್ರತ್ಯೇಕ ಡೆಂಘೀ ವಾರ್ಡ್ ತೆರೆಯಬೇಕು. ಡೆಂಗ್ಯೂ ಕಂಟ್ರೋಲ್ ಗೆ ಟಾಸ್ಕ್ ಪೋರ್ಸ್ ರಚನೆ ಮಾಡಬೇಕು. ಕೊಳಗೇರಿ ಪ್ರದೇಶದಲ್ಲೇ ಹೆಚ್ಚು ಡೆಂಗ್ಯೂ ವ್ಯಾಪಿಸಿದೆ. ಹೀಗಾಗಿ ಸ್ಲಂ ನಿವಾಸಿಗಳಿಗೆ ಉಚಿತವಾಗಿ ಸೊಳ್ಳೆ ಪರದೆ ವಿತರಣೆ ಮಾಡುವಂತೆ ಸೂಚಿಸಿದ್ದೇವೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.
ಇತ್ತ ಸರ್ಕಾರವನ್ನು ವಿಪಕ್ಷಗಳು ತರಾಟೆಗೆ ತೆಗೆದುಕೊಂಡಿವೆ. ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿಯಿಂದಾಗಿ ರಾಜ್ಯದಲ್ಲಿ ಡೆಂಗ್ಯೂ ಹಬ್ಬಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿವೆ.
