ವಿಜಯಪುರ: ಅಡ್ವಾನ್ಸ್ ಹಣ ಪಡೆದು ಕೆಲಸಕ್ಕೆ ತಡವಾಗಿ ಬಂದಿದ್ದಕ್ಕೆ ಕಾರ್ಮಿಕರ ಮೇಲೆ ಮಾಲೀಕ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಟ್ಟಿಗೆ ಕಾರ್ಖಾನೆ ಮಾಲೀಕ ಖೇಮು ರಾಠೋಡ್, ವಿಶಾಲ ಜುಮನಾಳ ಹಾಗೂ ಸಚಿವ ಮಾನವರ ಬಂಧಿತ ಆರೋಪಿಗಳು. ಅಲ್ಲದೇ, ಘಟನೆಯಲ್ಲಿ ಪರಾರಿಯಾಗಿರುವ ಮತ್ತಿಬ್ಬರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ವಿಜಯಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಜ. 18ರಂದು ಮಾಲೀಕ ಖೇಮು ರಾಥೋಡ್, ಸಹಚರರಿಂದ ವಿಜಯಪುರ ಹೊರವಲಯದ ಇಟ್ಟಿಗೆ ಕಾರ್ಖಾನೆಯಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಚಿಕ್ಕಲಕಿ ಗ್ರಾಮದ ಕಾರ್ಮಿಕರ ಮೇಲೆ ಹಲ್ಲೆ ನಡೆದಿದೆ.
ಮುಂಗಡ ಹಣ, ಕೆಲಸ ಮಾಡುವ ವಿಚಾರವಾಗಿ ಹಲ್ಲೆ ನಡೆದಿದೆ. ಮೂವರು ಕಾರ್ಮಿಕರ ಪಾದಗಳಿಗೆ ಕಟ್ಟಿಗೆ, ಪೈಪ್ ಗಳಿಂದ ಹೊಡೆದಿದ್ದಾರೆ. ಕಾರ್ಮಿಕರ ಮೇಲೆ ಹಲ್ಲೆ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಮಾನವೀಯ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ ಮೂವರನ್ನು ಬಂಧಿಸಲಾಗಿದೆ. ಇಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಚೂರಿನಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿ, ಈ ಘಟನೆ ಇಡೀ ಸಮಾಜವೇ ತಲೆ ತಗ್ಗಿಸುವಂತಿದೆ. ಲೇಬರ್, ಪೊಲೀಸ್ ಕೇಸ್ ಎಲ್ಲಾ ಸೆಕೆಂಡರಿ. ಈ ತರ ಮನಸ್ಥಿತಿ ಇರುವಂತಹ ಘಟನೆ ನಮ್ಮ ರಾಜ್ಯದಲ್ಲಿ ನಡೆದಿದೆ ಅಂದರೆ ನನಗೆ ವೈಯಕ್ತಿಕವಾಗಿ ತಲೆ ತಗ್ಗಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.