ಐಪಿಎಲ್ 18ನೇ ಆವೃತ್ತಿಯ 4ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಲಕ್ನೋ ತಂಡ 8 ವಿಕೆಟ್ ಕಳೆದುಕೊಂಡು 209 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ್ದ ಡೆಲ್ಲಿ ತಂಡ 9 ವಿಕೆಟ್ ಕಳೆದುಕೊಂಡು 19.3 ಓವರ್ ಗಳಲ್ಲಿ ಗೆಲುವಿನ ದಡ ಸೇರಿತು.
ಡೆಲ್ಲಿ ತಂಡದ ನಾಯಕ ಅಕ್ಷರ್ ಪಟೇಲ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡರು. ಹೀಗಾಗಿ ಮೊದಲು ಬ್ಯಾಟಿಂಗ್ ಗೆ ಇಳಿದ ಲಕ್ನೋ ಸೂಪರ್ ಜೈಂಟ್ಸ್ ಉತ್ತಮ ಆರಂಭ ಪಡೆಯಿತು. ಮರ್ಕರಮ್ ಮತ್ತು ಮಿಚೆಲ್ ಮಾರ್ಷ್ ಉತ್ತಮ ಆರಂಭ ಒದಗಿಸಿದರು. ಈ ವೇಳೆ ಮರ್ಕರಮ್ 15 ರನ್ ಗಳಿಸಿ ಔಟ್ ಆದರು. ಆಗ ನಿಕೋಲಸ್ ಪೂರನ್ ಮತ್ತು ಮಾರ್ಷ್ ಒಂದಾಗಿ ಡೆಲ್ಲಿ ಬೌಲರ್ ಗಳನ್ನು ಚೆಂಡಾಡಿದರು.
ಮಿಚೆಲ್ ಮಾರ್ಷ್ 36 ಬೌಲ್ ಗಳಲ್ಲಿ 6 ಬೌಂಡರಿ, 6 ಸಿಕ್ಸರ್ ಗಳೊಂದಿಗೆ 72 ರನ್ ಗಳಿಸಿದರು. ಪೂರನ್ 30 ಬೌಲ್ ಗಳನ್ನು ಎದುರಿಸಿ 75 ರನ್ ಗಳಿಸಿದರು. ಹೀಗಾಗಿ ತಂಡದ ಮೊತ್ತ ಏರಿಕೆ ಕಂಡಿತು. ಆದರೆ, ನಂತರ ಬಂದ ಬ್ಯಾಟ್ಸಮನ್ ಗಳು ಪ್ರತಿರೋಧ ಒಡ್ಡಲಿಲ್ಲ. ಡೇವಿಡ್ ಮಿಲ್ಲರ್ ಔಟ್ ಆಗದೆ 27 ರನ್ ಗಳಿಸಿದರು. ಪರಿಣಾಮ ತಂಡದ ಮೊತ್ತ ನಿಗದಿತ ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 209 ರನ್ ಗಳಾಯಿತು. ಡೆಲ್ಲಿ ಪರ ಮಿಚೆಲ್ ಸ್ಟಾರ್ಕ್ 3, ಕುಲದೀಪ್ ಯಾದವ್ 2, ವಿಪ್ರಾಜ್ ನಿಗಮ್, ಮುಖೇಶ್ ಕುಮಾರ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
ಕಠಿಣ ಗುರಿ ಬೆನ್ನಟ್ಟಿದ ಡೆಲ್ಲಿಗೆ ಆರಂಭಿಕ ಆಘಾತ ಎದುರಾಯಿತು. ಕೊನೆಯಲ್ಲಿ ಮಿಂಚಿದ ಅಶುತೋಷ್ ಶರ್ಮಾ 31 ಬೌಲ್ ಗಳಲ್ಲಿ ಅಜೇಯ 66 ರನ್ ಗಳಿಸಿ ತಂಡಕ್ಕೆ ಗೆಲುವು ತಂದು ಕೊಟ್ಟರು. ವಿಪ್ರಾಜ್ ನಿಗಮ್ 15 ಬೌಲ್ ಗಳಲ್ಲಿ 39 ರನ್, ಅಕ್ಷರ್ ಪಟೇಲ್ 22, ಪಾಫ್ ಡುಪ್ಲೆಸಿಸ್ 29 ರನ್ ಗಳಿಸಿದರು. 9 ವಿಕೆಟ್ ಕಳೆದುಕೊಂಡು ಇನ್ನೂ ಮೂರು ಬೌಲ್ ಗಳಿರುವಂತೆ ತಂಡ ಗೆಲುವಿನ ನಗೆ ಬೀರಿತು.