ನವದೆಹಲಿ: ತನ್ನ 65 ವರ್ಷ ವಯಸ್ಸಿನ ತಾಯಿಯ ಮೇಲೆಯೇ 39 ವರ್ಷದ ವ್ಯಕ್ತಿಯೊಬ್ಬ ಎರಡು ಬಾರಿ ಅತ್ಯಾಚಾರವೆಸಗಿದ ಘೋರ ಹಾಗೂ ಆಘಾತಕಾರಿ ಘಟನೆ ದೆಹಲಿಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಪುತ್ರನನ್ನು ಬಂಧಿಸಲಾಗಿದೆ. ತನ್ನ ತಾಯಿಯ ಚಾರಿತ್ರ್ಯ ಸರಿಯಿಲ್ಲ ಎಂದು ಹೇಳಿದ್ದ ಪುತ್ರ, ತಾಯಿಗೆ ಹಿಂದೆ ಇತ್ತೆಂದು ಹೇಳಲಾದ ಅಕ್ರಮ ಸಂಬಂಧವೊಂದಕ್ಕೆ ‘ಶಿಕ್ಷೆ’ ನೀಡುತ್ತಿರುವುದಾಗಿ ಹೇಳಿ ಆತ ಈ ಹೇಯ ಕೃತ್ಯ ಎಸಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಪೊಲೀಸರ ಪ್ರಕಾರ, ಸಂತ್ರಸ್ತ ಮಹಿಳೆ ತನ್ನ 25 ವರ್ಷದ ಮಗಳೊಂದಿಗೆ ಹೌಜ್ ಖಾಜಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಸೌದಿ ಅರೇಬಿಯಾಕ್ಕೆ ಧಾರ್ಮಿಕ ಪ್ರವಾಸ ಮುಗಿಸಿ ಕುಟುಂಬ ಹಿಂತಿರುಗಿದ ಕೂಡಲೇ ಈ ಘಟನೆ ನಡೆದಿದೆ.
ದೂರಿನ ಪ್ರಕಾರ, ಮಹಿಳೆಯು ತನ್ನ ಪತಿ (ನಿವೃತ್ತ ಸರ್ಕಾರಿ ನೌಕರ), ಆರೋಪಿ ಮಗ ಮತ್ತು ಕಿರಿಯ ಮಗಳೊಂದಿಗೆ ದೆಹಲಿಯ ಹೌಜ್ ಖಾಜಿ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ವಿವಾಹಿತರಾದ ಹಿರಿಯ ಮಗಳೊಬ್ಬರಿದ್ದು, ಅವರು ಇವರ ಮನೆಯ ಸಮೀಪದಲ್ಲೇ ವಾಸಿಸುತ್ತಿದ್ದಾರೆ.
ಜುಲೈ 17ರಂದು, ಮಹಿಳೆ, ಆಕೆಯ ಪತಿ ಮತ್ತು ಕಿರಿಯ ಮಗಳು ಸೌದಿ ಅರೇಬಿಯಾಕ್ಕೆ ತೆರಳಿದ್ದರು. ಅವರು ಪ್ರವಾಸದಲ್ಲಿದ್ದಾಗ, ಆರೋಪಿಯು ತನ್ನ ತಂದೆಗೆ ಕರೆ ಮಾಡಿ ತಕ್ಷಣ ದೆಹಲಿಗೆ ಹಿಂತಿರುಗುವಂತೆ ಒತ್ತಾಯಿಸಿದ್ದಾನೆ. ಅಲ್ಲದೆ, ತನ್ನ ತಾಯಿಯು ಅಕ್ರಮ ಸಂಬಂಧ ಹೊಂದಿರುವುದನ್ನು ತಾನು ಬಾಲ್ಯದಲ್ಲೇ ನೋಡಿದ್ದು, ಆಕೆಗೆ ಕೂಡಲೇ ವಿಚ್ಛೇದನ ನೀಡುವಂತೆಯೂ ಆಗ್ರಹಿಸಿದ್ದಾನೆ.
ಆಗಸ್ಟ್ 1 ರಂದು ಕುಟುಂಬ ದೆಹಲಿಗೆ ಮರಳಿದ ನಂತರ, ಆರೋಪಿಯು ತನ್ನ ತಾಯಿಯನ್ನು ಕೋಣೆಯೊಂದರಲ್ಲಿ ಕೂಡಿಹಾಕಿ, ಬುರ್ಖಾ ತೆಗೆಯುವಂತೆ ಒತ್ತಾಯಿಸಿ ಥಳಿಸಿದ್ದಾನೆ. ಬಾಲ್ಯದಲ್ಲಿ ಆಕೆ ತನ್ನನ್ನು “ಹಾಳು ಮಾಡಿದ್ದಾಳೆ” ಎಂದು ಆತ ಆರೋಪಿಸಿದ್ದಾನೆ. ಇದರಿಂದ ಬೇಸತ್ತು ಮನೆಯಿಂದ ಹೊರಟ ಮಹಿಳೆ, ತನ್ನ ಹಿರಿಯ ಮಗಳ ಮನೆಯಲ್ಲಿ ಆಶ್ರಯ ಪಡೆದಿದ್ದರು.
ಆಗಸ್ಟ್ 11 ರಂದು ಅವರು ಮನೆಗೆ ಮರಳಿದಾಗ, ದೌರ್ಜನ್ಯ ಮುಂದುವರಿದಿದೆ. ಅಂದು ರಾತ್ರಿ ಸುಮಾರು 9:30ಕ್ಕೆ, ಆರೋಪಿಯು ತನ್ನ ತಾಯಿಯೊಂದಿಗೆ ಖಾಸಗಿಯಾಗಿ ಮಾತನಾಡಬೇಕೆಂದು ಹೇಳಿ, ಮತ್ತೆ ಕೋಣೆಯಲ್ಲಿ ಕೂಡಿಹಾಕಿ ಅತ್ಯಾಚಾರ ಎಸಗಿದ್ದಾನೆ. ಇದು ಆಕೆಯ “ಹಿಂದಿನ ಸಂಬಂಧಗಳಿಗೆ” ಶಿಕ್ಷೆ ಎಂದು ಹೇಳಿದ್ದಾನೆ.
ಆಗಸ್ಟ್ 14 ರಂದು, ಮುಂಜಾನೆ ಸುಮಾರು 3:30ಕ್ಕೆ, ಆರೋಪಿ ಎರಡನೇ ಬಾರಿಗೆ ಅತ್ಯಾಚಾರ ಎಸಗಿದ್ದಾನೆ.
ಮರುದಿನ, ಸಂತ್ರಸ್ತೆಯು ತನ್ನ ಕಿರಿಯ ಮಗಳ ಬಳಿ ವಿಷಯವನ್ನು ಹೇಳಿಕೊಂಡಿದ್ದು, ಆಕೆಯ ಒತ್ತಾಯದ ಮೇರೆಗೆ ಇಬ್ಬರೂ ಹೌಜ್ ಖಾಜಿ ಪೊಲೀಸ್ ಠಾಣೆಗೆ ತೆರಳಿ ಲಿಖಿತ ದೂರು ನೀಡಿದ್ದಾರೆ.ದೂರಿನ ಆಧಾರದ ಮೇಲೆ, ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 64 (ಅತ್ಯಾಚಾರ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.



















