ಉಡುಪಿ: ಮಧ್ವನಗರಿ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಮತ್ತೊಂದು ಐತಿಹಾಸಿಕ ಹಾಗೂ ಭಕ್ತಿಪೂರ್ವಕ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜಾಗಿದೆ. ದೆಹಲಿಯ ಶ್ರೀಕೃಷ್ಣ ಭಕ್ತರೊಬ್ಬರು ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ಸಿದ್ಧಪಡಿಸಿರುವ ಅಪ್ಪಟ ಚಿನ್ನದ ಹಾಳೆಗಳ ‘ಭಗವದ್ಗೀತೆ’ಯನ್ನು ಜನವರಿ 8ರಂದು ಉಡುಪಿ ಕೃಷ್ಣನಿಗೆ ಅರ್ಪಿಸಲು ಸಿದ್ದಾವಾಗಿದೆ.
ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ‘ವಿಶ್ವಗೀತಾ ಪರ್ಯಾಯ’ದ ಸಮಾರೋಪದ ಅಂಗವಾಗಿ ಈ ವಿಶೇಷ ಹೊನ್ನಿನ ಕಾಣಿಕೆಯನ್ನು ಕೃಷ್ಣನ ಸನ್ನಿಧಿಯಲ್ಲಿ ಲೋಕಾರ್ಪಣೆ ಮಾಡಲಾಗುತ್ತಿದೆ. ಭಗವದ್ಗೀತೆಯ ಮಹತ್ವವನ್ನು ಸಾರುವ ಉದ್ದೇಶದಿಂದ ಹಮ್ಮಿಕೊಂಡಿರುವ ಈ ಕಾರ್ಯಕ್ರಮವು ಆಧ್ಯಾತ್ಮಿಕ ಲೋಕದಲ್ಲಿ ಹೊಸ ಮೈಲಿಗಲ್ಲಾಗಲಿದೆ.
ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಚಿನ್ನದ ಭಗವದ್ಗೀತೆಯನ್ನು ಅತ್ಯಂತ ಕಲಾತ್ಮಕವಾಗಿ ಸಿದ್ಧಪಡಿಸಲಾಗಿದೆ. ಇದರಲ್ಲಿ ಭಗವದ್ಗೀತೆಯ 18 ಅಧ್ಯಾಯಗಳ 700 ಶ್ಲೋಕಗಳನ್ನು ಚಿನ್ನದ ಹಾಳೆಗಳ ಮೇಲೆ ಅಂದವಾಗಿ ಮುದ್ರಿಸಲಾಗಿದೆ. ಪ್ರತಿಯೊಂದು ಅಕ್ಷರವೂ ಭಕ್ತಿಯ ಸಂಕೇತವಾಗಿ ಕಂಗೊಳಿಸುತ್ತಿದ್ದು, ಇದು ಮಠದ ಇತಿಹಾಸದಲ್ಲಿಯೇ ಅಪರೂಪದ ಕಾಣಿಕೆಯಾಗಿ ಉಳಿಯಲಿದೆ.
ಜನೆವರಿ 8ರಂದು ನಡೆಯಲಿರುವ ಈ ಸಮಾರಂಭದಲ್ಲಿ ಚಿನ್ನದ ಭಗವದ್ಗೀತೆಯನ್ನು ಚಿನ್ನದ ರಥದಲ್ಲಿ ಇರಿಸಿ ಭವ್ಯವಾಗಿ ಮೆರವಣಿಗೆ ಮಾಡಲಾಗುವುದು. ನಂತರ ಶಾಸ್ತ್ರೋಕ್ತವಾಗಿ ಕೃಷ್ಣನಿಗೆ ಅರ್ಪಿಸಲಾಗುವುದು. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಸೇರಿದಂತೆ ದೇಶದ ವಿವಿಧ ಭಾಗಗಳ ಗಣ್ಯರು ಹಾಗೂ ಸಾವಿರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ: ಉಡುಪಿ ಪರ್ಯಾಯಕ್ಕೆ ಮುಸ್ಲಿಂ ಸೌಹಾರ್ದ ಹೊರೆಕಾಣಿಕೆಗೆ ನಾವು ಅನುಮತಿ ನೀಡಿಲ್ಲ | ಯಶ್ ಪಾಲ್ ಸುವರ್ಣ



















