ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಭಾನುವಾರ ಸಂಜೆ ವಾಯುಮಾಲಿನ್ಯದ ವಿರುದ್ಧ ಇಂಡಿಯಾ ಗೇಟ್ ಬಳಿ ನಡೆದ ಪ್ರತಿಭಟನೆಯು ಅನಿರೀಕ್ಷಿತ ತಿರುವು ಪಡೆದುಕೊಂಡಿದ್ದು, ಹಿಂಸಾಚಾರದ ಸ್ವರೂಪ ಪಡೆದಿದೆ. ಶಾಂತಿಯುತವಾಗಿ ಆರಂಭವಾದ ಪ್ರತಿಭಟನೆ, ಪೊಲೀಸರ ಮೇಲೆ ಪ್ರತಿಭಟನಾಕಾರರು ‘ಚಿಲ್ಲಿ ಸ್ಪ್ರೇ’ (ಮೆಣಸಿನಕಾಯಿ ಸ್ಪ್ರೇ) ದಾಳಿ ನಡೆಸುವುದರೊಂದಿಗೆ ಉದ್ವಿಗ್ನಗೊಂಡಿತು. ಇದೇ ಸಂದರ್ಭದಲ್ಲಿ ಕೆಲವರು ಇತ್ತೀಚೆಗೆ ಹತನಾದ ನಕ್ಸಲ್ ನಾಯಕ ಮದ್ವಿ ಹಿಡ್ಮಾ ಪರ ಘೋಷಣೆಗಳನ್ನು ಕೂಗಿದ್ದು ವಿವಾದಕ್ಕೆ ಕಾರಣವಾಗಿದೆ.
ಪೊಲೀಸರ ಪ್ರಕಾರ, ಪ್ರತಿಭಟನಾಕಾರರು ಯಾವುದೇ ಅನುಮತಿಯಿಲ್ಲದೆ ಇಂಡಿಯಾ ಗೇಟ್ ಬಳಿಯ ರಸ್ತೆಯ ಮಧ್ಯಭಾಗದಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕುಳಿತು ಸಂಚಾರಕ್ಕೆ ಅಡ್ಡಿಪಡಿಸಿದರು. ಸಂಚಾರ ದಟ್ಟಣೆ ಮತ್ತು ಆಂಬ್ಯುಲೆನ್ಸ್‌ಗಳಿಗೆ ತೊಂದರೆಯಾಗುತ್ತಿರುವುದನ್ನು ಮನಗಂಡ ಪೊಲೀಸರು ಅವರನ್ನು ಚದುರಿಸಲು ಮುಂದಾದರು. ಈ ವೇಳೆ ಪೊಲೀಸರ ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ಏರ್ಪಟ್ಟಿತು. ಕೆಲ ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳನ್ನು ಮುರಿದು, ಪೊಲೀಸರ ಮೇಲೆ ಚಿಲ್ಲಿ ಸ್ಪ್ರೇ ಮತ್ತು ಪೆಪ್ಪರ್ ಸ್ಪ್ರೇ ಸಿಂಪಡಿಸಿದರು ಎಂದು ಆರೋಪಿಸಲಾಗಿದೆ.
ಈ ಘಟನೆಯಲ್ಲಿ ಮೂವರು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ರಾಮ್ ಮನೋಹರ್ ಲೋಹಿಯಾ (ಆರ್‌ಎಂಎಲ್) ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು 22 ಜನರನ್ನು ಬಂಧಿಸಿದ್ದು, ಕರ್ತವ್ಯಪಥ ಮತ್ತು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ನಕ್ಸಲ್ ನಾಯಕನ ಪರ ಘೋಷಣೆ
ಆಘಾತಕಾರಿ ಸಂಗತಿಯೆಂಬಂತೆ, ಪರಿಸರ ಕಾಳಜಿಯ ಹೆಸರಿನಲ್ಲಿ ನಡೆದ ಈ ಹೋರಾಟದಲ್ಲಿ ಕೆಲವರು ನಕ್ಸಲ್ ನಾಯಕನ ಪರ ದನಿ ಎತ್ತಿದ್ದಾರೆ. ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹತನಾದ ಕುಖ್ಯಾತ ನಕ್ಸಲ್ ನಾಯಕ ಮದ್ವಿ ಹಿಡ್ಮಾ ಪರವಾಗಿ ಪ್ರತಿಭಟನಾಕಾರರಲ್ಲಿ ಕೆಲವರು “ಮದ್ವಿ ಹಿಡ್ಮಾ ಅಮರ್ ರಹೇ” (ಮದ್ವಿ ಹಿಡ್ಮಾ ಚಿರಾಯುವಾಗಲಿ) ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಅಲ್ಲದೆ, “ಬಿರ್ಸಾ ಮುಂಡಾ ಅವರಿಂದ ಮದ್ವಿ ಹಿಡ್ಮಾ ವರೆಗೆ ನಮ್ಮ ಕಾಡು ಮತ್ತು ಪರಿಸರದ ಹೋರಾಟ ಮುಂದುವರಿಯಲಿದೆ” ಎಂಬ ಬರಹವಿದ್ದ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಯಿತು.
ಬಿಜೆಪಿ ಆಕ್ರೋಶ
ಈ ಘಟನೆಯನ್ನು ದೆಹಲಿ ಬಿಜೆಪಿ ನಾಯಕ ಕಪಿಲ್ ಮಿಶ್ರಾ ತೀವ್ರವಾಗಿ ಖಂಡಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (ಟ್ವಿಟರ್) ಪ್ರತಿಕ್ರಿಯಿಸಿರುವ ಅವರು, “ಜಿಹಾದಿಗಳು ಮತ್ತು ನಕ್ಸಲರು ಈಗ ಸಾಮಾಜಿಕ ಕಾರ್ಯಕರ್ತರ ಮುಖವಾಡ ಧರಿಸಿದ್ದಾರೆ. ಮಾಲಿನ್ಯದ ವಿರುದ್ಧದ ಪೋಸ್ಟರ್ ಹಿಡಿದು ‘ಲಾಲ್ ಸಲಾಮ್’ ಘೋಷಣೆ ಕೂಗುತ್ತಿದ್ದಾರೆ. ದೆಹಲಿ ಇಂತಹ ಸಿದ್ಧಾಂತಗಳಿಗೆ ತಕ್ಕ ಉತ್ತರ ನೀಡಿದೆ” ಎಂದು ಕಿಡಿಕಾರಿದ್ದಾರೆ.
ದೆಹಲಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 400ರ ಗಡಿ ದಾಟಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಶಾಲೆಗಳಿಗೆ ರಜೆ ಘೋಷಿಸಿ ಹೈಬ್ರಿಡ್ ತರಗತಿಗಳನ್ನು ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತುರ್ತು ಕ್ರಮಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳು ಹಾಗೂ ಪರಿಸರವಾದಿಗಳು ಪ್ರತಿಭಟನೆಗೆ ಕರೆ ನೀಡಿದ್ದರು. ಆದರೆ ಪರಿಸರ ಕಾಳಜಿಯ ಈ ಪ್ರತಿಭಟನೆ ರಾಜಕೀಯ ಮತ್ತು ನಕ್ಸಲ್ ಪರ ಘೋಷಣೆಗಳ ಮೂಲಕ ದಿಕ್ಕು ತಪ್ಪಿದೆ ಎಂಬ ಆರೋಪ ಕೇಳಿಬಂದಿದೆ. ಪೊಲೀಸರು ಹಿಡ್ಮಾ ಪರ ಘೋಷಣೆ ಕೂಗಿದವರನ್ನು ಗುರುತಿಸಿ ಕಾನೂನು ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ:ತಮಿಳುನಾಡಿನಲ್ಲಿ ಖಾಸಗಿ ಬಸ್‌ಗಳ ನಡುವೆ ಭೀಕರ ಅಪಘಾತ | 6 ಮಂದಿ ಸಾವು, 28 ಮಂದಿ ಗಾಯ!


















