ಉಪ್ಪಾರಪೇಟೆ ಪೊಲೀಸ್ ಠಾಣೆಯ ಎದುರು ವಿನೂತನ ಶೌಚಾಲಯ
ರೋಟರಿ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್ 3192 ಮತ್ತು ಸುಲಭ್ ಇಂಟರ್‌ನ್ಯಾಷನಲ್ ಸಹಯೋಗ
ಬೆಂಗಳೂರು : ಬೆಂಗಳೂರು ನಗರದ ಉಪ್ಪಾರ ಪೇಟೆ ಪೊಲೀಸ್ ಠಾಣೆಯ ಎದುರು ಮಂಗಳಮುಖಿಯವರಿಗೆ ವಿಶೇಷವಾಗಿ, ಭಾರತ ದೇಶದಲ್ಲಿ ಮೊದಲ ಬಾರಿಗೆ ನಿರ್ಮಿಸಲಾಗಿರುವ ಶೌಚಾಲಯವನ್ನು ಇಂದು ಲೋಕಾರ್ಪಣೆಗೊಳಿಸಲಾಯಿತು. ರೋಟರಿ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್ 3192 – ಸುಲಭ್ ಇಂಟರ್‌ನ್ಯಾಷನಲ್ ಸಹಯೋಗದಲ್ಲಿ ನಿರ್ಮಿಸಲಾಗಿದ್ದು, ಈ ಯೋಜನೆ ದೇಶದಲ್ಲೇ ಮೊದಲ ಬಾರಿಗೆ ಲಿಂಗ-ತಟಸ್ಥ (Gender-Neutral) ಮತ್ತು ಸುಲಭ ಪ್ರವೇಶಕ್ಕೆ ಅನುವು ಮಾಡಿಕೊಡುವಂತಹ ಸಾರ್ವಜನಿಕ ಸ್ವಚ್ಛ, ಸುಂದರ ಶೌಚಾಲಯ ಇದಾಗಿದೆ.
ಶೌಚಾಲಯವನ್ನು ಲೋಕಾರ್ಪಣೆಗೊಳಿಸಿದ ಆರ್ ಐ ಡೈರೆಕ್ಟರ್ ಕೆ ಪಿ ನಾಗೇಶ್ ಮಾತನಾಡಿ, ನೂರು ವರ್ಷಗಳ ಇತಿಹಾಸವನ್ನು ಹೊಂದಿರುವ ರೋಟರಿ ಸಂಸ್ಥೆ, ಮೊದಲಿನಿಂದಲೂ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ದೇಶದಲ್ಲೇ ಮೊದಲ ಬಾರಿಗೆ ಮಂಗಳಮುಖಿಯರಿಗೆ ಪ್ರತ್ಯೇಕವಾದ ಶೌಚಾಲಯವನ್ನು ನಿರ್ಮಿಸಲಿದ್ದು ಇಂದು ಲೋಕಾರ್ಪಣೆಗೊಳಿಸಲಾಗಿದೆ. ಸುಲಭ್ ಇಂಟರ್‌ನ್ಯಾಷನಲ್ ಸಹಯೋಗದಲ್ಲಿ ಸಿಎಸ್‌ಆರ್ ಅನುದಾನದ ಅಡಿಯಲ್ಲಿ ದೇಶದ ಪ್ರತಿ ಜಿಲ್ಲೆಗಳಲ್ಲೂ ಇಂತಹ ಲಿಂಗ-ತಟಸ್ಥ ಶೌಚಾಲಯಗಳನ್ನು ನಿರ್ಮಿಸುವುದು ನಮ್ಮ ಗುರಿಯಾಗಿದೆ ಎಂದರು.
ಈ ಯೋಜನೆಯ ಬಗ್ಗೆ ಮಾತನಾಡಿದ ರೋಟರಿ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್ 3192ನ ಚಾರ್ಟರ್ ಗವರ್ನರ್ ಆರ್.ಐ. ವಿ. ಶ್ರೀನಿವಾಸ ಮೂರ್ತಿ, “ನಮ್ಮ ನಗರವನ್ನು ಹೆಚ್ಚು ಒಳಗೊಂಡ ಮತ್ತು ಸುಲಭ ಪ್ರವೇಶ ಹೊಂದುವಂತೆ ಮಾಡುವ ದಿಸೆಯಲ್ಲಿ ಇದು ಒಂದು ಪ್ರಮುಖ ಹೆಜ್ಜೆ. ದೇಶದಲ್ಲಿ ಇತರ ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳಿಗೆ ಮಾದರಿಯಾಗಲು ನಾವು ಬಯಸುತ್ತೇವೆ” ಎಂದು ಹೇಳಿದರು.
ತೃತೀಯ ಲಿಂಗಿಗಳು, ಎಲ್ಲಾ ಲಿಂಗ ಸಮುದಾಯ, ವಿಶೇಷ ಚೇತನ ವ್ಯಕ್ತಿಗಳಗೆ ಸೌಕರ್ಯ ಒದಗಿಸುವ, ಸುರಕ್ಷಿತ, ಗೌರವಪೂರ್ವಕ ಮತ್ತು ಸುಲಭ ಪ್ರವೇಶ ಹೊಂದಿದ ಶೌಚಾಲಯಗಳನ್ನು ಒದಗಿಸುವ ಗುರಿ ಹೊಂದಲಾಗಿದೆ. ಶೌಚಾಲಯಗಳನ್ನು ಯಾವುದೇ ಅಡೆತಡೆಗಳಿಲ್ಲದೆ, ಸ್ವಚ್ಛ ಹಾಗೂ ಎಲ್ಲರಿಗೂ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ.