ತಿರುವನಂತಪುರಂ: ಕೇರಳದಲ್ಲಿ ತುರ್ತು ಭೂಸ್ಪರ್ಶ ಮಾಡಿ, ಕಳೆದ 19 ದಿನಗಳಿಂದಲೂ ಅಲ್ಲೇ ಸಿಲುಕಿರುವ ಬ್ರಿಟಿಷ್ ರಾಯಲ್ ನೇವಿಯ ಎಫ್-35ಬಿ ಸ್ಟೆಲ್ತ್ ಯುದ್ಧ ವಿಮಾನವನ್ನು ರಿಪೇರಿ ಮಾಡುವ ಎಲ್ಲ ಪ್ರಯತ್ನಗಳೂ ವಿಫಲಗೊಂಡಿದೆ. ಹೀಗಾಗಿ ಈಗ ಅದನ್ನು ಕಳಚಿ, ಸಿ-17 ಗ್ಲೋಬ್‌ಮಾಸ್ಟರ್ ಸರಕು ಸಾಗಣೆ ವಿಮಾನದ ಮೂಲಕ ಯುಕೆಗೆ ಕೊಂಡೊಯ್ಯಲು ಬ್ರಿಟನ್ ಸರ್ಕಾರ ಪರಿಶೀಲಿಸುತ್ತಿದೆ. ಈ ಪ್ರಕ್ರಿಯೆಯು ಬೃಹತ್ ಲಾಜಿಸ್ಟಿಕಲ್ ಮತ್ತು ಭದ್ರತಾ ಸವಾಲನ್ನು ಒಡ್ಡಿದೆ.
ಸಿ-17 ಗ್ಲೋಬ್‌ಮಾಸ್ಟರ್ ವಿಮಾನದಲ್ಲಿ ಸಾಗಿಸಲು ಎಫ್-35ಬಿ ಅನ್ನು ಮೊದಲು ಸಂಪೂರ್ಣವಾಗಿ ಕಳಚಬೇಕಾಗುತ್ತದೆ. ವಿಮಾನವು ಅತಿ ರಹಸ್ಯ ತಂತ್ರಜ್ಞಾನ ಹೊಂದಿರುವ ಕಾರಣ ಇದು ಸರಳವಾದ ಕೆಲಸವಲ್ಲ.
ವಿಶೇಷ ಪರಿಣತಿ: ಏರೋಸ್ಪೇಸ್ ಮತ್ತು ರಕ್ಷಣಾ ಸಂಸ್ಥೆ ಲಾಕ್‌ಹೀಡ್ ಮಾರ್ಟಿನ್‌ನ ತರಬೇತಿ ಪಡೆದ ಇಂಜಿನಿಯರ್‌ಗಳು ಮಾತ್ರ ಈ ವಿಭಜನಾ ಕಾರ್ಯವನ್ನು ನಿರ್ವಹಿಸುವ ಅಧಿಕಾರ ಹೊಂದಿದ್ದಾರೆ.
ಕಟ್ಟುನಿಟ್ಟಿನ ಮೇಲ್ವಿಚಾರಣೆ ಮತ್ತು ಭದ್ರತೆ: ಬ್ರಿಟಿಷ್ ಸೇನಾ ಸಿಬ್ಬಂದಿ ಸಂಪೂರ್ಣ ಪ್ರಕ್ರಿಯೆಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಾರೆ. ಡೇಟಾ ಸೋರಿಕೆಯ ಅಪಾಯವನ್ನು ಕಡಿಮೆ ಮಾಡಲು ಪ್ರತಿ ಚಲನೆಯನ್ನು ದಾಖಲಿಸಲಾಗುತ್ತದೆ ಮತ್ತು ಪರಿಶೀಲಿಸಲಾಗುತ್ತದೆ; ವಿಮಾನದ ಪ್ರತಿ ಸ್ಕ್ರೂ ಕೂಡ ಭದ್ರತಾ-ಕೋಡೆಡ್ ಆಗಿರುತ್ತದೆ.
ತಂತ್ರಜ್ಞಾನ ಕಳ್ಳತನ ತಡೆಗಟ್ಟುವುದು: ಎಫ್-35ನ ಸ್ಟೆಲ್ತ್ ತಂತ್ರಜ್ಞಾನಗಳನ್ನು ರಕ್ಷಿಸುವುದು ಅತ್ಯಂತ ಮಹತ್ವದ್ದಾಗಿದೆ. ಯಾವುದೇ ಅನಧಿಕೃತ ಪ್ರವೇಶ ಅಥವಾ ಕಳ್ಳತನವು ನಿರ್ಣಾಯಕ ಯುದ್ಧ ರಹಸ್ಯಗಳನ್ನು ಬಹಿರಂಗಪಡಿಸಬಹುದು, ಇದು ಗಂಭೀರ ರಾಜತಾಂತ್ರಿಕ ಮತ್ತು ಮಿಲಿಟರಿ ಪರಿಣಾಮಗಳನ್ನು ಉಂಟುಮಾಡಬಹುದು ಮತ್ತು ರಾಷ್ಟ್ರೀಯ ರಕ್ಷಣಾ ಸಮಗ್ರತೆಗೆ ಧಕ್ಕೆ ತರಬಹುದು.
ವಿಭಜಿತ ಎಫ್-35 ಅನ್ನು ವಿಮಾನದ ಮೂಲಕ ಸಾಗಿಸುವ ಪರಿಕಲ್ಪನೆ ಹೊಸದೇನಲ್ಲ. 2019ರ ಮೇ ತಿಂಗಳಲ್ಲಿ ಎಫ್-35 ಲೈಟ್ನಿಂಗ್ II ವಿಮಾನದ ರೆಕ್ಕೆಯನ್ನು ತೆಗೆದು, ಫ್ಲೋರಿಡಾದ ಎಗ್ಲಿನ್ ವಾಯುನೆಲೆಯಿಂದ ಯುಟಾದ ಹಿಲ್ ಏರ್ ಫೋರ್ಸ್ ಬೇಸ್‌ಗೆ ಸಿ-17 ಗ್ಲೋಬ್‌ಮಾಸ್ಟರ್ ಮೂಲಕ ವಿಮಾನದಲ್ಲಿ ಸಾಗಿಸಲಾಗಿತ್ತು.
ಎಫ್-35 ವಿಶೇಷವೇನು?
ಎಫ್-35 ವಿಶ್ವದ ಅತ್ಯಾಧುನಿಕ ಐದನೇ ತಲೆಮಾರಿನ ಯುದ್ಧ ವಿಮಾನವಾಗಿದೆ. ಇದು ಅತ್ಯಾಧುನಿಕ ಸ್ಟೆಲ್ತ್ ಲೇಪನ ಮತ್ತು ರೇಡಾರ್ ಬ್ಲಾಕರ್‌ಗಳನ್ನು ಹೊಂದಿದ್ದು, ಪತ್ತೆಹಚ್ಚಲು ಅಸಾಧ್ಯವಾಗಿದೆ. ಆಧುನಿಕ ವೈಮಾನಿಕ ಯುದ್ಧಕ್ಕಾಗಿ ಕೃತಕ ಬುದ್ಧಿಮತ್ತೆ (AI) ಮತ್ತು ಡೇಟಾ ಫ್ಯೂಷನ್, ಎನ್‌ಕ್ರಿಪ್ಟ್ ಮಾಡಿದ ಸಾಫ್ಟ್‌ವೇರ್ ಮತ್ತು ಸೆನ್ಸರ್‌ಗಳನ್ನು ಇದು ಹೊಂದಿದೆ. ಇದು ಪರಮಾಣು ಶಸ್ತ್ರಾಸ್ತ್ರಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ.