ರೋಹಿತ್ ಶರ್ಮಾ, ಭಾರತ ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ನಾಯಕರ ಸಾಲಿನಲ್ಲಿ ನಿಲ್ಲುವ ಹೆಸರು. ಸ್ಫೋಟಕ ಬ್ಯಾಟಿಂಗ್ ನಿಂದಲೇ ಕ್ರಿಕೆಟ್ ಲೋಕದಲ್ಲಿ ಅಭಿಮಾನಿಗಳ ಬಳಗವನ್ನೇ ಪಡೆದ ರೋಹಿತ್ ನಡೆದು ಬಂದ ಹಾದಿಯೂ ಅಷ್ಟೇ ರೋಚಕ. ಆದರೆ, ಇದೇ ರೋಹಿತ್ ಇತ್ತೀಚೆಗೆ ನಿಜಕ್ಕೂ ಭಾವುಕರಾಗಿದ್ದರು. ಅವರ ಕಣ್ಣಂಚಲ್ಲಿ ನೀರು ಜಿನುಗುತ್ತಿತ್ತು. ಅವರಲ್ಲೊಂದು ಸಾರ್ಥಕ ಭಾವ ಆವರಿಸಿತ್ತು.
ವಾಂಖೆಡೆ ಸ್ಟೇಡಿಯಂ ಸ್ಟ್ಯಾಂಡ್ ಗೆ ರೋಹಿತ್ ಹೆಸರು
ಮಹಾರಾಷ್ಟ್ರದ ನಾಸಿಕ್ ನಲ್ಲಿ ಹುಟ್ಟಿದ ರೋಹಿತ್ ಮುಂದೆ ಬಂದು ನೆಲೆ ಕಂಡುಕೊಂಡಿದ್ದು ಮುಂಬೈನಲ್ಲಿ. ಅಂಡರ್ 14, ಅಂಡರ್ 16 ತಂಡಗಳನ್ನು ಪ್ರತಿನಿಧಿಸುತ್ತಿದ್ದ ಇದೇ ರೋಹಿತ್ ಅಂದು ಅಂದ್ರೆ 2003…2004ರಲ್ಲಿ ವಾಂಖೆಡೆ ಅಂಗಳಕ್ಕೆ ಪ್ರವೇಶ ನಿರಾಕರಿಸಲ್ಪಟ್ಟಿದ್ರು. ಅಂದಿನ ರಣಜಿ ತಾರೆಯರನ್ನು ಕಾಣಲು ಬಾಲಕ ರೋಹಿತ್ ಹಾತೊರೆದಿದ್ದನ್ನು ಅವರು ಇಂದಿಗೂ ಮರೆತಿಲ್ಲ. ಶಿವಾಜಿ ಪಾರ್ಕ್ ನಿಂದ ರೈಲ್ವೆ ಹಳಿ ಮಾರ್ಗವಾಗಿ ವಾಂಖೆಡೆಗೆ ಬಂದು ದಿನವಿಡೀ ಆಟಗಾರರ ಮುಖದರ್ಶನಕ್ಕೆ ಕಾದು ಕೂತಿದ್ದನ್ನ ರೋಹಿತ್ ಇಂದು ಅದೇ ಅಂಗಳದಲ್ಲಿ ಕೂತು ಮೆಲುಕು ಹಾಕಿದ್ದಾರೆ. ಪ್ರವೇಶ ನಿರಾಕರಿಸಿದ್ದ ಮೈದಾನದ ಸ್ಟ್ಯಾಂಡ್ ವೊಂದು ಈಗ ಅವರದ್ದೇ ಹೆಸರಿನಿಂದ ನಾಮಕರಣವಾಗಿ ರಾರಾಜಿಸುತ್ತಿದೆ.
ಭಾರತದ ತಂಡದ ಯುವ ಆಟಗಾರನಾಗಿ ರೋಹಿತ್ ಮುಂದೆ ಬೆಳದ ಪರಿ ನಿಜಕ್ಕೂ ಅನುಕರಣೀಯ. ಇವತ್ತಾಗಲೇ ನಿವೃತ್ತಿಯ ಅಂಚನ್ನು ತಲುಪಿರೋ ರೋಹಿತ್ ವೃತ್ತಿ ಬದುಕಿಗೊಂದು ದೊಡ್ಡ ಗೌರವವನ್ನು ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ನೀಡಿದೆ. ಅಷ್ಟೇ ಅಲ್ಲಾ ಅದೇ ಸ್ಟ್ಯಾಂಡ್ ನಲ್ಲಿ ಕುಳಿತು ರೋಹಿತ್ ತಮ್ಮ ಕಳೆದು ಹೋದ ದಿನಗಳನ್ನು ಮೆಲುಕು ಹಾಕಿದ್ದು ಅವಿಸ್ಮರಣೀಯ. ಅಷ್ಟೇ ಅಲ್ಲಾ ಇದೇ ಸಂದರ್ಭದಲ್ಲಿ ಅವರ ಕಣ್ಮಂಚುಗಳು ಒದ್ದೆಯಾಗಿದ್ದು ಅವರ ಸಾರ್ಥಕತೆಯ ಪ್ರತೀಕವಾಗಿತ್ತು.