ಬೆಂಗಳೂರು : ಗುಟ್ಕಾ ವಸ್ತುಗಳನ್ನು ತಪಾಸಣೆ ನಡೆಸಲು ಮುಂದಾದ ಪೊಲೀಸ್ ಕಾನ್ಸ್ಟೇಬಲ್ವೊಬ್ಬರನ್ನು ಸಿನಿಮೀಯ ರೀತಿಯಲ್ಲಿ ಸುಮಾರು 4 ಕಿ.ಮೀ. ದೂರದವರೆಗೆ ಕಾರಿನ ಬಾನೆಟ್ನಲ್ಲಿ ಹೊತ್ತೊಯ್ದಿರುವ ಘಟನೆ ಬೆಂಗಳೂರು ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಘಟನೆ ಭಾನುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ತಮಿಳುನಾಡಿನ ಹೊಸೂರು ಸಮೀಪದ ರಾಜ್ಯ ಗಡಿಭಾಗದ ಜುಜುವಾಡಿ ಪೊಲೀಸ್ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ನಂತರ ಕರ್ನಾಟಕದ ಬೆಂಗಳೂರಿನಿಂದ ನಿಷೇಧಿತ ಗುಟ್ಕಾ ವಸ್ತುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಐಷಾರಾಮಿ ಕಾರನ್ನು ತಡೆದಿದ್ದಾರೆ. ಆಗ ಕಾರಿನಲ್ಲಿ ಬಂದವರು ಕಾರನ್ನು ನಿಲ್ಲಿಸುವ ಬದಲು ಕಾನ್ಸ್ಟೇಬಲ್ ರಾಜೀವ್ ಗಾಂಧಿ ಅವರನ್ನು ಕೆಡವಿದ್ದಾರೆ. ಆಗ ಅವರು ಕಾರಿನ ಮುಂಭಾಗದ ಬಾನೆಟ್ ಮೇಲೆ ಬಿದ್ದಿದ್ದಾರೆ. ಅದನ್ನೂ ಲೆಕ್ಕಿಸದ ಕಾರಿನ ಚಾಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 4 ಕಿ.ಮೀ ದೂರದವರೆಗೆ ಓಡಿಸಿದ್ದಾರೆ.
ಸಿನಿಮಾ ಶೈಲಿಯಲ್ಲೇ ನಡೆದಿರುವ ಈ ಘಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿದ್ದ ಸಾರ್ವಜನಿಕರು ಹಾಗೂ ವಾಹನ ಸವಾರರಲ್ಲಿ ತೀವ್ರ ಆಘಾತ ಉಂಟು ಮಾಡಿದೆ.
ವಿಷಯ ತಿಳಿದು ಹೊಸೂರು ಸಿಪ್‌ಕಾಟ್ ಪೊಲೀಸ್ ಇನ್ಸ್‌ಪೆಕ್ಟರ್ ಸೈಯದ್ ಮುಬಾರಕ್ ನೇತೃತ್ವದಲ್ಲಿ ಪೊಲೀಸರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರನ್ನು ಹಿಂಬಾಲಿಸಿದ್ದಾರೆ. ಬಳಿಕ ಹೊಸೂರು ದರ್ಗಾ ಪ್ರದೇಶದಲ್ಲಿ ಸಾರ್ವಜನಿಕರ ನೆರವಿನಿಂದ ಕಾರು ಸುತ್ತುವರೆದು ಹಿಡಿದಿದ್ದಾರೆ. ಆಗ ಕಾರಿನಲ್ಲಿದ್ದ ವ್ಯಕ್ತಿ ಮತ್ತೆ ಅಲ್ಲಿಯೇ ನಿಂತಿದ್ದ ಪೊಲೀಸರ ಮೇಲೆ ಕಾರು ಓಡಿಸಲು ಯತ್ನಿಸಿದ್ದು, ಈ ವೇಳೆ, ಕಾರಿನ ಮುಂಭಾಗ ಜಖಂಗೊಂಡಿದೆ. ಹೆಡ್ ಕಾನ್ಸ್ಟೇಬಲ್ ರಾಜೀವ್ ಗಾಂಧಿ ಅವರ ಕಾಲು ಮುರಿತವಾಗಿದೆ.
ಸದ್ಯ ನಿಷೇಧಿತ ಗುಟ್ಕಾ ಮತ್ತು ಕರ್ನಾಟಕ ರಾಜ್ಯದ ಮದ್ಯದ ಬಾಟಲಿಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ತನಿಖೆ ನಡೆಸಿದಾಗ ಆತ ಹೊಸೂರು ಕಾಳಗುಂದ ಬಡಾವಣೆಯ ಯಾರಬ್ ಪಾಷಾ (34) ಎಂದು ತಿಳಿದು ಬಂದಿದೆ.
ವಶಪಡಿಸಿಕೊಂಡ ಐಷಾರಾಮಿ ಕಾರನ್ನು ಪೊಲೀಸರು ತಪಾಸಣೆ ನಡೆಸಿದಾಗ 2,20,000 ಮೌಲ್ಯದ 390 ಕೆಜಿ ನಿಷೇಧಿತ ಗುಟ್ಕಾ ಹಾಗೂ 48 ಪ್ಯಾಕೆಟ್ ಕರ್ನಾಟಕ ಮದ್ಯ ಪತ್ತೆಯಾಗಿದೆ. ಎಲ್ಲವನ್ನೂ ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಘಟನೆ ಹೊಸೂರು ಭಾಗದಲ್ಲಿ ಸಂಚಲನ ಮೂಡಿಸಿದೆ.
ಇದನ್ನೂ ಓದಿ : ರಾಜ್ಯದಲ್ಲಿ ಗಾಂಜಾ ಘಾಟು ಅವ್ಯಾಹತ!



















