ಗುರುಗ್ರಾಮ: ರಾಷ್ಟ್ರಮಟ್ಟದ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ (25) ಅವರನ್ನು ಗುರುವಾರ (ಜುಲೈ 10) ತಮ್ಮ ಗುರುಗ್ರಾಮ ನಿವಾಸದಲ್ಲಿ ಅವರ ತಂದೆಯೇ ಗುಂಡಿಕ್ಕಿ ಹತ್ಯೆಗೈದಿದ್ದಾರೆ. ರಾಧಿಕಾ ಬೆಳಗಿನ ಉಪಹಾರ ತಯಾರಿಸುತ್ತಿದ್ದಾಗ ಈ ಭೀಕರ ಘಟನೆ ನಡೆದಿದೆ ಎಂದು ಹೇಳಲಾಗಿದೆ. ತಂದೆ ದೀಪಕ್ ಯಾದವ್ ತಮ್ಮ ಮಗಳ ಮೇಲೆ ಐದು ಬಾರಿ ಗುಂಡು ಹಾರಿಸಿದ್ದು, ಅದರಲ್ಲಿ ಮೂರು ಗುಂಡುಗಳು ರಾಧಿಕಾ ದೇಹಕ್ಕೆ ಹೊಕ್ಕಿದ್ದು, ಸ್ಥಳದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದೀಪಕ್ ಯಾದವ್ (49) ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದು, ತನ್ನ ಮಗಳ ಗಳಿಕೆ ಮತ್ತು ಅವಳ ಖ್ಯಾತಿಯಿಂದ ತಾನು ಜೀವನ ನಡೆಸುತ್ತಿದ್ದೇನೆ ಎಂದು ವಜೀರಾಬಾದ್ ಗ್ರಾಮದ ಜನರು ಆಡಿದ “ಅಣುಕು ಮಾತುಗಳಿಂದ” ನೊಂದು ಈ ಕೃತ್ಯ ಎಸಗಿರುವುದಾಗಿ ಹೇಳಿದ್ದಾರೆ.
ಆಗಿದ್ದೇನು?
ಗುರುವಾರ ಬೆಳಗ್ಗೆ 10:30ರ ಸುಮಾರಿಗೆ, ರಾಧಿಕಾ ಅಡುಗೆಮನೆಯಲ್ಲಿ ಬೆಳಗಿನ ಉಪಾಹಾರ ತಯಾರಿಸುತ್ತಿದ್ದರು. ಇದೇ ವೇಳೆ ಅಲ್ಲಿಗೆ ಬಂದ ಅಪ್ಪ ದೀಪಕ್ ಯಾದವ್ ತಮ್ಮ ಲೈಸೆನ್ಸ್ ಹೊಂದಿದ್ದ .32 ಬೋರ್ ರಿವಾಲ್ವರ್‌ನಿಂದ ಆಕೆಯ ಬೆನ್ನಿಗೆ ಮೂರು ಗುಂಡುಗಳನ್ನು ಹಾರಿಸಿದ್ದಾರೆ. ಇದೇ ಕಟ್ಟಡದ ಕೆಳ ಮಹಡಿಯಲ್ಲಿ ವಾಸವಿದ್ದ ರಾಧಿಕಾ ಚಿಕ್ಕಪ್ಪ ಕುಲದೀಪ್ ಯಾದವ್ ಗುಂಡಿನ ಶಬ್ದ ಕೇಳಿ ಮೇಲೆ ಓಡಿಬಂದಾಗ, ರಾಧಿಕಾ ಅಡುಗೆಮನೆಯ ನೆಲದ ಮೇಲೆ ನಿಶ್ಚಲವಾಗಿ ಬಿದ್ದಿದ್ದರು. ರಿವಾಲ್ವರ್ ಡ್ರಾಯಿಂಗ್ ರೂಮಿನಲ್ಲಿ ಇತ್ತು.

“ಸುಮಾರು 10:30ರ ಸಮಯಕ್ಕೆ ನನಗೆ ಭಾರೀ ಶಬ್ದ ಕೇಳಿಸಿತು. ತಕ್ಷಣ ಮೇಲಿನ ಮಹಡಿಗೆ ಓಡಿ ಹೋಗಿ ನೋಡಿದಾಗ ಅಣ್ಣನ ಮಗಳು ಅಡುಗೆಮನೆಯಲ್ಲಿ ನಿಶ್ಚಲವಾಗಿ ಬಿದ್ದಿದ್ದಳು. ರಿವಾಲ್ವರ್ ಡ್ರಾಯಿಂಗ್ ರೂಮಿನ ನೆಲದ ಮೇಲಿತ್ತು. ನಾನು ಮತ್ತು ನನ್ನ ಮಗ ಕೂಡಲೇ ಆಕೆಯನ್ನು ಆಸ್ಪತ್ರೆಗೆ ಹೊತ್ತೊಯ್ದೆವು. ಆದರೆ ಅಷ್ಟರಲ್ಲಾಗಲೇ ಅವಳು ಪ್ರಾಣಬಿಟ್ಟಿದ್ದಳು” ಎಂದು ಕುಲದೀಪ್ ಪೊಲೀಸರಿಗೆ ತಿಳಿಸಿದ್ದಾರೆ.
ಕೌಟುಂಬಿಕ ಕಲಹ?
ಪೊಲೀಸರ ಪ್ರಕಾರ, ರಾಧಿಕಾ ಅವರ ಆರ್ಥಿಕ ಸ್ವಾತಂತ್ರ್ಯ, ಇನ್‌ಸ್ಟಾಗ್ರಾಮ್ ರೀಲ್‌ಗಳು ಮತ್ತು ಸಂಗೀತ ವೀಡಿಯೋದಲ್ಲಿ ಆಕೆ ಕಾಣಿಸಿಕೊಂಡಿರುವುದು ತಂದೆ ದೀಪಕ್ ಸಿಟ್ಟಿಗೆ ಕಾರಣವಾಗಿತ್ತು. ಇದು ಯಾದವ್ ಕುಟುಂಬದಲ್ಲಿ ಹಲವು ತಿಂಗಳಿಂದ ಉದ್ವಿಗ್ನತೆ ಸೃಷ್ಟಿಸಿತ್ತು. ಆಗಾಗ್ಗೆ ಈ ವಿಚಾರದಲ್ಲಿ ಜಗಳಗಳೂ ನಡೆಯುತ್ತಿದ್ದವು. ದೀಪಕ್ ಯಾದವ್ ಮಾಜಿ ಬ್ಯಾಂಕ್ ಉದ್ಯೋಗಿಯಾಗಿದ್ದು, ತನ್ನ ಮಗಳು ಗುರುಗ್ರಾಮದ ಸೆಕ್ಟರ್ 57 ರಲ್ಲಿ ಸ್ವಂತ ಟೆನಿಸ್ ಅಕಾಡೆಮಿ ತೆರೆದ ನಂತರ ಆಕೆಯ ಆರ್ಥಿಕ ಸ್ವಾವಲಂಬನೆ, ಬೆಳೆಯುತ್ತಿರುವ ಪ್ರತಿಷ್ಠೆ ಮತ್ತು ಸ್ವಾತಂತ್ರ್ಯದ ಬಗ್ಗೆ ದೀಪಕ್ ಅಸಮಾಧಾನ ಹೊಂದಿದ್ದರು.
“ನಾನು ವಜೀರಾಬಾದ್ ಗ್ರಾಮಕ್ಕೆ ಹಾಲು ತರಲು ಹೋದಾಗ, ಜನರೆಲ್ಲರೂ “ನೀನು ಮಗಳ ಹಣದಿಂದ ಬದುಕುತ್ತಿರುವವನಲ್ಲವೇ” ಎಂದು ಅಣಕಿಸುತ್ತಿದ್ದರು. ಇದರಿಂದ ನನಗೆ ತುಂಬಾ ಕಸಿವಿಸಿ ಮತ್ತು ಹಿಂಸೆಯಾಗುತ್ತಿತ್ತು. ಕೆಲವರು ನನ್ನ ಮಗಳ ಚಾರಿತ್ರ್ಯವನ್ನೂ ಪ್ರಶ್ನಿಸಿದ್ದರು. ನಾನು ನನ್ನ ಮಗಳಿಗೆ ಟೆನಿಸ್ ಅಕಾಡೆಮಿ ಮುಚ್ಚುವಂತೆ ಹೇಳಿದೆ. ಆದರೆ ಅವಳು ನಿರಾಕರಿಸಿದಳು” ಎಂದು ದೀಪಕ್ ಪೊಲೀಸರ ಮುಂದೆ ಹೇಳಿದ್ದಾರೆ.
ಸಂಗೀತ ವಿಡಿಯೋ ವಿವಾದ
ಇದೆಲ್ಲದರ ನಡುವೆಯೇ ಒಂದು ವರ್ಷದ ಹಿಂದೆ ಎಲ್ಎಲ್ಎಫ್ ರೆಕಾರ್ಡ್ಸ್ ಲೇಬಲ್ ಅಡಿಯಲ್ಲಿ ನಿರ್ಮಾಣವಾದ ಇನಾಮ್ ಎಂಬ ಕಲಾವಿದನ ‘ಕಾರ್ವಾನ್’ ಹಾಡಿನಲ್ಲಿ ರಾಧಿಕಾ ಕಾಣಿಸಿಕೊಂಡಿದ್ದರು. ಈ ವಿಡಿಯೋದಲ್ಲಿ ರಾಧಿಕಾ, ಇನಾಮ್ ಜೊತೆಗೆ ಹಲವು ದೃಶ್ಯಗಳಲ್ಲಿ ನಟಿಸಿದ್ದಾರೆ. ತಂದೆ ದೀಪಕ್ ಈ ವಿಡಿಯೋ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಸಾಮಾಜಿಕ ಮಾಧ್ಯಮ ಖಾತೆಗಳಿಂದ ಆ ವಿಡಿಯೋ ತೆಗೆದುಹಾಕುವಂತೆ ಮಗಳಿಗೆ ಸೂಚಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಇತ್ತೀಚಿನ ಪಂದ್ಯವೊಂದರಲ್ಲಿ ರಾಧಿಕಾ ಭುಜದ ಗಾಯಕ್ಕೆ ಒಳಗಾಗಿದ್ದು, ಆಟದಿಂದ ವಿರಾಮ ತೆಗೆದುಕೊಳ್ಳಬೇಕಾಯಿತು. ಆದರೆ, ಟೆನಿಸ್‌ನಿಂದ ಸಂಪೂರ್ಣವಾಗಿ ದೂರ ಉಳಿಯುವ ಬದಲು, ಅವರು ಯುವ ಆಟಗಾರರಿಗೆ ತರಬೇತಿ ನೀಡಲು ಆರಂಭಿಸಿದ್ದರು. ಮಗಳ ಆದಾಯದ ಮೇಲೆ ತಾನು ಅವಲಂಬಿತನಾಗಿದ್ದೇನೆ ಎಂದು ಗ್ರಾಮಸ್ಥರು ಮಾಡಿದ ಟೀಕೆಗಳ ನಂತರ ತಂದೆಯ ಆಕ್ಷೇಪಗಳು ಮತ್ತಷ್ಟು ಹೆಚ್ಚಾಗಿದ್ದವು ಎಂದು ಪೊಲೀಸರು ಹೇಳಿದ್ದಾರೆ. ತನ್ನ ಮಗಳ ಯಶಸ್ಸಿನಿಂದ ತಾನು ಬದುಕುತ್ತಿದ್ದೇನೆ ಎಂಬ ಮಾತುಗಳು “ಮುಜುಗರ” ಉಂಟುಮಾಡುತ್ತಿದ್ದವು ಎಂದು ದೀಪಕ್ ತನ್ನ ತಪ್ಪೊಪ್ಪಿಗೆಯಲ್ಲಿ ತಿಳಿಸಿದ್ದಾರೆ.
ಕುಟುಂಬದ ಹೇಳಿಕೆ
ದೀಪಕ್‌ನ ಕಿರಿಯ ಸಹೋದರ ಮತ್ತು ರಾಧಿಕಾ ಚಿಕ್ಕಪ್ಪ ಕುಲದೀಪ್ ಯಾದವ್ ಅವರ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿದೆ. ಘಟನೆ ನಡೆದಾಗ ಆರೋಪಿಯ ಪತ್ನಿ ಮಂಜು ಯಾದವ್ ಮನೆಯಲ್ಲಿಯೇ ಇದ್ದರು. ಆದರೆ ಅವರು ಲಿಖಿತ ಹೇಳಿಕೆ ನೀಡಲು ನಿರಾಕರಿಸಿದ್ದಾರೆ. ಪೊಲೀಸರ ಪ್ರಕಾರ, ಅವರಿಗೆ ಜ್ವರ ಇದ್ದ ಕಾರಣ ತಮ್ಮ ಕೋಣೆಯೊಳಗೆ ಬಾಗಿಲು ಹಾಕಿಕೊಂಡು ಕುಳಿತಿದ್ದರು ಎನ್ನಲಾಗಿದೆ.
“ರಾಧಿಕಾ ಖ್ಯಾತ ಟೆನಿಸ್ ಆಟಗಾರ್ತಿಯಾಗಿದ್ದು, ಹಲವು ಟ್ರೋಫಿಗಳನ್ನು ಗೆದ್ದಿದ್ದಳು. ಆಕೆಯ ಸಾವಿನಿಂದ ಆಘಾತವಾಗಿದೆ. ಅವಳನ್ನು ಏಕೆ ಕೊಲ್ಲಲಾಯಿತು ಎಂದೇ ಅರ್ಥವಾಗುತ್ತಿಲ್ಲ. ನಾನು ಮೊದಲ ಮಹಡಿಗೆ ಹೋದಾಗ, ನನ್ನ ಸಹೋದರ ದೀಪಕ್, ನನ್ನ ಅತ್ತಿಗೆ ಮಂಜು ಯಾದವ್ ಮತ್ತು ರಾಧಿಕಾ ಮಾತ್ರ ಇದ್ದರು…” ಎಂದು ಕುಲದೀಪ್ ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ.