ವಾಷಿಂಗ್ಟನ್: ಕಳೆದ ಒಂಬತ್ತು ತಿಂಗಳಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್)ದಲ್ಲೇ ಉಳಿದಿರುವ ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್(Sunita Williams) ಮತ್ತು ಬುಚ್ ವಿಲ್ಮೋರ್ ಅವರು ಭೂಮಿಗೆ ಬರುವ ದಿನಾಂಕವನ್ನು ನಾಸಾ ಅಧಿಕೃತವಾಗಿ ಘೋಷಣೆ ಮಾಡಿದೆ. ಇಬ್ಬರೂ ಗಗನಯಾತ್ರಿಗಳು ಮಂಗಳವಾರ ಅಂದರೆ, ಮಾರ್ಚ್ 18ರಂದು ಭೂಮಿಗೆ ವಾಪಸ್ ಆಗಲಿದ್ದಾರೆ.
ಅಮೆರಿಕದ ಕಾಲಮಾನದ ಪ್ರಕಾರ ಮಂಗಳವಾರ ಸಂಜೆ 5.57ಕ್ಕೆ ಸ್ಪೇಸ್ ಎಕ್ಸ್ ನ ಡ್ರ್ಯಾಗನ್ ಕ್ರ್ಯಾಫ್ಟ್ ಮೂಲಕ ಭೂಮಿಗೆ ಆಗಮಿಸಲಿದ್ದಾರೆ ಎಂದು ನಾಸಾ ತಿಳಿಸಿದೆ. ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಜತೆಗೆ ನಿಕ್ ಹೇಗ್ ಹಾಗೂ ಅಲೆಕ್ಸಾಂಡರ್ ಅವರು ಸೇರಿ ಒಟ್ಟು ನಾಲ್ವರನ್ನು ಗಗನನೌಕೆಯು ಫ್ಲೋರಿಡಾದ ಕಡಲ ತೀರಕ್ಕೆ ಬಂದು ಇಳಿಯಲಿದೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ.
ಬೋಯಿಂಗ್ ಸಂಸ್ಥೆಯ ಸ್ಟಾರ್ ಲೈನರ್ ಗಗನನೌಕೆಯಲ್ಲಿ 2024ರ ಜೂನ್ 5ರಂದು ಇವರು ಐಎಸ್ ಎಸ್ ಗೆ ತೆರಳಿದ್ದರು. ಒಂಬತ್ತು ದಿನಗಳ ಅಧ್ಯಯನದ ನಂತರ ಇವರು ಭೂಮಿಗೆ ವಾಪಸಾಗಬೇಕಿತ್ತು. ಆದರೆ, ಗಗನನೌಕೆಯಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಮರಳಲು ಆಗಿರಲಿಲ್ಲ.
ಗಗನಯಾತ್ರಿಗಳಿಗೆ ಬೇಬಿ ಫೀಟ್ ಸಮಸ್ಯೆ
ಸುನೀತಾ ಹಾಗೂ ವಿಲ್ಮೋರ್ ಅವರು ಭೂಮಿಗೆ ಮರಳುತ್ತಿದ್ದಂತೆಯೇ “ಶಿಶು ಪಾದ” (ಬೇಬಿ ಫೀಟ್) ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ ಎಂದು ನಾಸಾದ ಮಾಜಿ ಗಗನಯಾತ್ರಿ ಲೆರಾಯ್ ಚಿಯಾವೊ ಈಗಾಗಲೇ ತಿಳಿಸಿದ್ದಾರೆ. ಅಂದರೆ, ಅವರ ಪಾದಗಳು ಮಗುವಿನ ಪಾದದಂತೆ ಮೃದುವಾಗಿರುತ್ತದೆ. ಹೀಗಾಗಿ ಭೂಮಿಗೆ ಮರಳಿದ ತಕ್ಷಣ ಅಂಗಾಲಿನ ಮೇಲೆ ಒತ್ತಡ ಹಾಕಿ ನಿಲ್ಲುವುದಕ್ಕಾಗಲೀ, ನಡೆಯುವುದಕ್ಕಾಗಲೀ ಸಾಧ್ಯವಾಗದು. ವಿಶೇಷ ವ್ಯಾಯಾಮಗಳ ಮೂಲಕ ಅವರು ಮತ್ತೆ ಮೊದಲಿನ ಸ್ಥಿತಿಗೆ ತಲುಪಬೇಕಾಗುತ್ತದೆ ಎಂದೂ ಚಿಯಾವೊ ತಿಳಿಸಿದ್ದಾರೆ.