ಬೆರಂಗಳೂರು : ಬೆಂಗಳೂರಿನ ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಯನ್ನು ಈ ಬಾರಿ ವಿಜೃಂಭಣೆಯಿಂದ ನಡೆಸಲು ರಾಜ್ಯ ಸರ್ಕಾರ ತಿರ್ಮಾನಿಸಿದೆ. ಈ ಸಂಬಂಧ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ಇಂದು ಪೂರ್ವಾಭಾವಿ ಸಿದ್ದತಾ ಸಭೆ ನಡೆದಿದ್ದು, 2 ದಿನಗಳ ಕಾಲ ಇದ್ದ ಪರಿಷೆಯನ್ನು ಈ ಬಾರಿ 5 ದಿನಗಳಿಗೆ ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ. ಈ ಮೂಲಕ ನೆರೆಹೊರೆಯ ಕಡಲೆಕಾಯಿ ಬೆಳೆಗಾರರು, ರೈತರಿಗೆ, ಲಕ್ಷಾಂತರ ಭಕ್ತರಿಗೆ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಂತಾಗಿದೆ.

ಈ ವರ್ಷ ನವೆಂಬರ್ 17ರಿಂದ ಆರಂಭವಾಗುವ ಕಡಲೆಕಾಯಿ ಪರಿಷೆಯನ್ನು 5 ದಿನಗಳಿಗೆ ವಿಸ್ತರಿಸಿ, ವಿಜೃಂಭಣೆಯಿಂದ ನಡೆಸಲು ನಿರ್ಧರಿಸಲಾಗಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಅವರು ಸಭೆ ಬಳಿಕ ಮಾಹಿತಿ ನೀಡಿದ್ದಾರೆ. ಹಾಗೆಯೇ ಈ ಬಾರಿಯ ಕಡಲೆಕಾಯಿ ಪರಿಷೆಯನ್ನು ವಿಶೇಷವಾಗಿ 21 ಬಸವಣ್ಣಗಳನ್ನ ಕರೆಸಿ ಅವುಗಳಿಗೆ ಮೇವು ಹಾಕುವ ಮುಖೇನ ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟನೆ ಮಾಡಲಿದ್ದಾರೆ ಎಂದು ಸಚಿವರು ವಿವರಿಸಿದ್ದಾರೆ.
ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಇಂದು ನಡೆದ ಸಭೆಯಲ್ಲಿ ಸ್ಥಳೀಯ ಶಾಸಕ ರವಿಸುಬ್ರಹ್ಮಣ್ಯ, ಉದಯ್ ಗರುಡಾಚಾರ್ ಸೇರಿ ಮುಜರಾಯಿ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು. ಈ ಸಭೆಯಲ್ಲಿ ಕಡಲೆಕಾಯಿ ಪರಿಷೆಯನ್ನು ಈ ಬಾರಿ ಹೇಗೆ ನಡೆಸಬೇಕು, ಯಾವಾಗ ನಡೆಸಬೇಕು ಎಂಬೆಲ್ಲಾ ವಿಷಯಗಳ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ.
ಹೊಸ ಪೀಳಿಗೆಗೆ ಸಾಂಪ್ರದಾಯಿಕ ಕಡಲೆಕಾಯಿ ಪರಿಷೆಯನ್ನು ಪರಿಚಯಿಸುವ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ವಿನೂತನ ಕಾರ್ಯಕ್ರಮಗಳನ್ನು ಕೈಗೊಳ್ಳಲು ಜಿಬಿಎ ಮತ್ತು ಮುಜರಾಯಿ ಇಲಾಖೆ ಸಕಲ ಸಿದ್ಧತೆ ನಡೆಸಿಕೊಂಡಿವೆ. ಅಲ್ಲದೆ, ಸರ್ಕಾರ ಪ್ಲಾಸ್ಟಿಕ್ ಮುಕ್ತ ಪರಿಷೆ ಕೈಗೊಳ್ಳಲು ಈ ಬಾರಿಯೂ ಪಣತೊಟ್ಟಿರೋದು ಒಂದು ಕಡೆಯಾದ್ರೆ, ಎರಡೇ ದಿನಕ್ಕೆ ಸೀಮಿತವಾಗಿದ್ದ ಪರಿಷೆ ಈ ಬಾರಿ ಐದು ದಿನಕ್ಕೆ ಏರಿಕೆ ಮಾಡಿ ಪರಿಷೆಗೆ ಬರೋ ಜನರಿಗೆ ಶುಭಸುದ್ದಿ ಕೊಟ್ಟಿದೆ. ಅದರಂತೆ ನವಂಬರ್ 17ರಿಂದ 22ರವರೆಗೆ ಕಡಲೆಕಾಯಿ ಪರಿಷೆ ನಡೆಯಲಿದೆ.