ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣ ರಾಜ್ಯಗಳಿಗೆ ಕೇಂದ್ರ ಚುನಾವಣಾ ಆಯೋಗವು ಚುನಾವಣೆ ದಿನಾಂಕ ಘೋಷಿಸಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಸಲು ಆಯೋಗ ನಿರ್ಧರಿಸಿದೆ. ಸೆಪ್ಟೆಂಬರ್ 18, 25 ಮತ್ತು ಅಕ್ಟೋಬರ್ 1ರಂದು ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಆದರೆ, ಹರಿಯಾಣದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಅಲ್ಲಿ ಅಕ್ಟೋಬರ್ 1ರಂದು ಮತದಾನ ನಡೆಯಲಿದೆ. ಎರಡೂ ರಾಜ್ಯಗಳ ಚುನಾವಣೆಗಳ ಮತ ಎಣಿಕೆ ಕಾರ್ಯ ಅಕ್ಟೋಬರ್ 4ರಂದು ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ 10 ವರ್ಷಗಳ ನಂತರ ವಿಧಾನ ಸಭಾ ಚುನಾವಣೆ ನುಡೆಯುತ್ತಿದೆ. 370ನೇ ವಿಧಿ ರದ್ಧಾದ ನಂತರ ಇದೇ ಮೊದಲ ಬಾರಿಗೆ ಅಲ್ಲಿ ಚುನಾವಣೆ ನಡೆಯುತ್ತಿದೆ. ಒಟ್ಟು 90 ಕ್ಷೇತ್ರಗಳಿಗೆ ಮತದಾನ ನಡಯಲಿದೆ. ಶಾಂತಿಯುತವಾಗಿ ಚುನಾವಣೆ ನಡೆಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಆಯೋಗ ಹೇಳಿದೆ. ಇನ್ನೂ ಹರಿಯಾಣದಲ್ಲಿ ಕೂಡ 90 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ಜಮ್ಮು ಕಾಶ್ಮೀರದಲ್ಲಿ 3 ಹಂತಗಳಲ್ಲಿ ಚುನಾವಣೆ ನಡೆಸಲು ಆಯೋಗ ತೀರ್ಮಾನಿಸಿದೆ. ಮೊದಲ ಹಂತದ ಚುನಾವಣೆಯು ಆಗಸ್ಟ್ 20ರಂದು ಅಧಿಸೂಚನೆ ಜಾರಿಗೊಳ್ಳಲಿದೆ. ಆಗಸ್ಟ್ 27 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, 28ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಆಗಸ್ಟ್ 30ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಸೆಪ್ಟೆಂಬರ್ 18ರಂದು ಚುನಾವಣೆ ನಡೆಯಲಿದೆ. ಎರಡನೇ ಹಂತದ ಚುನಾವಣೆಗೆ ಆಗಸ್ಟ್ 29ರಂದು ಅಧಿಸೂಚನೆ ಜಾರಿಯಾಗಲಿದೆ. ಸೆಪ್ಟೆಂಬರ್ 5ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, 6ರಂದು ನಾಮಪತ್ರಗಳನ್ನು ಪರಿಶೀಲನೆ ನಡೆಸಲಾಗುತ್ತದೆ. ಸೆಪ್ಟೆಂಬರ್ 9ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ. ಸೆಪ್ಟೆಂಬರ್ 25ರಂದು ಚುನಾವಣೆ ನಡೆಯಲಿದೆ.
ಮೂರನೇ ಹಂತದ ಚುನಾವಣೆಗೆ ಸೆಪ್ಟೆಂಬರ್ 5ರಂದು ಅಧಿಸೂಚನೆ ಪ್ರಕಟವಾಗಲಿದೆ. ಸೆಪ್ಟೆಂಬರ್ 13ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯಲು 17 ಕೊನೆಯ ದಿನಾಂಕವಾಗಿರುತ್ತದೆ. ಅಕ್ಟೋಬರ್ 1ರಂದು ಮತದಾನ ಜರುಗಲಿದೆ. ಅಕ್ಟೋಬರ್ 4ರಂದು ನಡೆಯಲಿದೆ.
ಹರಿಯಾಣದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಸೆಪ್ಟೆಂಬರ್ 5ರಂದು ಅಧಿಸೂಚನೆ ಪ್ರಕಟಗೊಳ್ಳಲಿದೆ. 12ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. 13ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಅಕ್ಟೋಬರ್ 1ರಂದು ಮತದಾನ ಪ್ರಕ್ರಿಯೆ ನಡೆಯಲಿದ್ದು. 4ರಂದು ಮತ ಎಣಿಕೆ ನಡೆಯಲಿದೆ.