ಮೈಸೂರು: ವಿಶ್ವವಿಖ್ಯಾತ ದಸರಾ ಸಂಭ್ರಮ ರಾಜ್ಯದಲ್ಲಿ ಕಳೆಗಟ್ಟಿದೆ. ನವರಾತ್ರಿ (Navaratri) ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಮೈಸೂರಿನಲ್ಲಿ (Mysore) ಈ ಬಾರಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ನವರಾತ್ರಿಯ 9ನೇ ದಿನ ಇಂದು (ಅ.11) ಆಯುಧ ಪೂಜೆ ನಡೆಯುತ್ತಿದೆ.
ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಕಾರ್ಯಕ್ರಮ ಆರಂಭವಾಗಿದೆ. ಬೆಳಗ್ಗೆ 6 ಗಂಟೆಗೆ ಚಾಮುಂಡಿ ತೊಟ್ಟಿಯಲ್ಲಿ ಚಂಡಿ ಹೋಮ ನೆರವೇರಿತು. ಖಾಸಗಿ ಆಯುಧಗಳನ್ನು ಪೂಜೆ ಮಾಡಲಾಗಿದೆ. ನಂತರ ಆಯುಧಗಳನ್ನು ಆನೆ ಬಾಗಿಲು ಮೂಲಕ ಕೋಡಿ ಸೋಮೇಶ್ವರ ದೇವಾಲಯಕ್ಕೆ ತೆಗೆದುಕೊಂಡು ಹೋಗಲಾಯಿತು. 7.30ರಿಂದ 8 ಗಂಟೆಯೊಳಗೆ ದೇಗುಲದಿಂದ ಖಾಸಗಿ ಆಯುಧಗಳನ್ನು ಆನೆ ಬಾಗಿಲು ಮುಖಾಂತರ ಕಲ್ಯಾಣ ಮಂಟಪಕ್ಕೆ ಆಗಮಿಸಿದವು.
ಚಂಡಿ ಹೋಮ ಪೂರ್ಣಾಹುತಿ, 11.45ಕ್ಕೆ ಪಟ್ಟದ ಆನೆ, ಕುದುರೆ, ಹಸು ಆನೆ ಬಾಗಿಲಿಗೆ ಆಗಮಿಸುತ್ತವೆ. ಮಧ್ಯಾಹ್ನ 12.20ರಿಂದ 12.45ರೊಳಗೆ ಅರಮನೆ ಕಲ್ಯಾಣ ಮಂಟಪದಲ್ಲಿ ಆಯುಧ ಪೂಜೆ ನೆರವೇರಲಿದೆ. ಸಂಜೆ ಖಾಸಗಿ ದರ್ಬಾರ್ ನಂತರ ಸಿಂಹ ಮುಖ ವಿಸರ್ಜನೆ ನಡೆಯಲಿದೆ. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮನೆ ದೇವರ ದರ್ಶನ ಮಾಡಲಿದ್ದಾರೆ. ಆನಂತರ ಮೈಸೂರು ಅರಮನೆಯಲ್ಲಿ ದಫ್ತಾರ್ ಪೂಜೆ ನೆರವೇರುತ್ತದೆ.
ದಸರಾ ಹಬ್ಬದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಇಂದಿನಿಂದ ಮೂರು ದಿನ ಮೈಸೂರು ಪ್ರವಾಸದಲ್ಲಿದ್ದಾರೆ. ಇಂದು ಮತ್ತು ನಾಳೆ ಎರಡು ದಿನ ದಸರಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ನಂತರ, ಸಿಎಂ ಸಿದ್ದರಾಮಯ್ಯ ಭಾನುವಾರ ಧಾರವಾಡ ಮತ್ತು ಬೆಳಗಾವಿಗೆ ತೆರಳಲಿದ್ದಾರೆ.
ಅಕ್ಟೋಬರ್ 12 ರಂದು ಬೆಳಿಗ್ಗೆ 10 ಗಂಟೆಗೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಮಧ್ಯಾಹ್ನ 1.41 ರಿಂದ 2.10ರ ನಡುವೆ ಅರಮನೆಯ ಬಲರಾಮ ದ್ವಾರದಲ್ಲಿರುವ ನಂದಿ ಧ್ವಜಕ್ಕೆ ಪೂಜೆ ಮಾಡಲಿದ್ದಾರೆ. ಸಂಜೆ 4ರಿಂದ ಅರಮನೆ ಒಳಾವರಣದಲ್ಲಿ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡಲಿದ್ದಾರೆ. ನಂತರ ಬನ್ನಿಮಂಟಪ ಮೈದಾನದಲ್ಲಿ ರಾತ್ರಿ 7 ಗಂಟೆಗೆ ಆಯೋಜಿಸಿರುವ ಪಂಜಿನ ಕವಾಯತು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.