ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 7 ಜನ ಆರೋಪಿಗಳಿಗೆ ಈಗಾಗಲೇ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಆದರೆ, ಇನ್ನೂ ಐವರು ಜೈಲಿನಲ್ಲೇ ಇದ್ದು, ಬಿಡುಗಡೆಯ ಭಾಗ್ಯ ಸಿಕ್ಕಿಲ್ಲ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್ ಆಗಿದ್ದ ಒಟ್ಟು 17 ಜನ ಆರೋಪಿಗಳಲ್ಲಿ 13 ಜನ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಇನ್ನೂ ಐವರಿಗೆ ಜಾಮೀನು ಸಿಕ್ಕಿಲ್ಲ. ಎ3 ಆರೋಪಿ ಆಗಿರುವ ಪವನ್, ಪವಿತ್ರಾ ಗೌಡ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ರೇಣುಕಾಸ್ವಾಮಿಯವರ ಜೊತೆಗೆ ಪವಿತ್ರಾ ಗೌಡರ ಹೆಸರಿನಲ್ಲಿ ಚಾಟ್ ಮಾಡಿದ್ದಾರೆಂದು ಹೇಳಲಾಗಿದೆ. ರೇಣುಕಾಸ್ವಾಮಿ ತಮಗೆ ಅಶ್ಲೀಲ ಸಂದೇಶಗಳನ್ನು ಕಳಿಸುತ್ತಿದ್ದ ಕುರಿತು ಮೊದಲು ಪವನ್ ಗೆ ಹೇಳಿದ್ದರು. ಆದರೆ, ಪವನ್ ಜಾಮೀನು ಅರ್ಜಿ ಸಲ್ಲಿಸಿರಲಿಲ್ಲ. ಹೀಗಾಗಿ ವಿಚಾರಣೆ ನಡೆದಿಲ್ಲ.
ಎ4 ಆರೋಪಿ ರಾಘವೇಂದ್ರ ಚಿತ್ರದುರ್ಗ ಜಿಲ್ಲಾ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ. ಚಿತ್ರದುರ್ಗದಲ್ಲಿದ್ದ ರೇಣುಕಾಸ್ವಾಮಿಯನ್ನು ಮನವೊಲಿಸಿ ಬೆಂಗಳೂರಿಗೆ ಕರೆತರಲು ತಯಾರಿ ನಡೆಸಿದ್ದ. ರೇಣುಕಾಸ್ವಾಮಿ ಬೆಂಗಳೂರಿಗೆ ಬರಲು ಈತನೆ ಕಾರಣ. ಈತ ಕೂಡ ಜಾಮೀನು ಅರ್ಜಿ ಸಲ್ಲಿಸಿಲ್ಲ. ಹೀಗಾಗಿ ಆತನಿಗೆ ಜಾಮೀನು ಸಿಕ್ಕಿಲ್ಲ.
ಎ 5 ಆರೋಪಿ ನಂದೀಶ್ ಎಂಬಾತ ದರ್ಶನ್ ಅಭಿಮಾನಿ. ಈಗ ಮೈಸೂರು ಜೈಲಿನಲ್ಲಿದ್ದಾನೆ. ರೇಣುಕಾಸ್ವಾಮಿಯನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರದ ಪಟ್ಟಣಗೆರೆ ಶೆಡ್ ಕರೆತಂದಿದ್ದಾಗ, ರೇಣುಕಾಸ್ವಾಮಿಯನ್ನು ಹೆಚ್ಚು ಹೊಡೆದಿದ್ದ ಎಂಬ ಆರೋಪವಿದೆ.
ಎ 9 ಆರೋಪಿ ಧನರಾಜ್ ಕೂಡ ದರ್ಶ್ ಅಭಿಮಾನಿ. ಶೆಡ್ ನಲ್ಲಿ ರೇಣುಕಾಸ್ವಾಮಿಗೆ ಕರೆಂಟ್ ಶಾಕ್ ನೀಡಿದ್ದು ಈತ ಎಂಬ ಆರೋಪ ಎದುರಿಸುತ್ತಿದ್ದಾನೆ. ಈತ ಕೂಡ ಅರ್ಜಿ ಹಾಕಿಲ್ಲ. ಎ 10 ಆರೋಪಿ ವಿನಯ್ ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ನ ಮಾಲೀಕ. ದರ್ಶನ್ ಅಭಿಮಾನಿ. ಅಲ್ಲದೇ, ತನ್ನ ರೆಸ್ಟೋರೆಂಟ್ ನಲ್ಲಿ ದರ್ಶನ್ ಕಾರ್ನರ್ ಎಂದು ಒಂದಿಷ್ಟು ಜಾಗವನ್ನು ಮೀಸಲಿರಿಸಿದ್ದೆ. ದರ್ಶನ್ ಶೆಡ್ ಗೆ ಹೋಗುತ್ತಿದ್ದ ವೇಳೆ ಈತನೂ ಹೋಗಿದ್ದ. ಈತ ವಿಜಯಪುರ ಜೈಲಿನಲ್ಲಿದ್ದಾನೆ. ಈತ ಕೂಡ ಅರ್ಜಿ ಸಲ್ಲಿಸಿಲ್ಲ. ಅರ್ಜಿ ಸಲ್ಲಿಸದ ಹಿನ್ನೆಲೆಯಲ್ಲಿ ಈ ಐವರಿಗೆ ಜಾಮೀನು ಸಿಕ್ಕಿಲ್ಲ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಜನ ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ.