ಬೆಂಗಳೂರು: ಕೊಲೆ ಪ್ರಕರಣದಲ್ಲಿ(Chitradurga Renukaswamy murder case) ಪರಪ್ಪನ ಅಗ್ರಹಾರ (Parappa Agrahara) ಸೇರಿರುವ ನಟ ದರ್ಶನ್ ಗೆ (Actor Darshan)ಗೆ ಈಗ ಮತ್ತಷ್ಟು ಸಂಕಷ್ಟ ಶುರುವಾಗಿದೆ. ಕೇಸ್ ಮೇಲೆ ಕೇಸ್ ದಾಖಲಾಗುತ್ತಿದ್ದು, ದಿನದಿಂದ ದಿನಕ್ಕೆ ತೊಂದರೆ ಹೆಚ್ಚಾಗುತ್ತಿದೆ.
ಜೈಲಿನಲ್ಲಿ ದರ್ಶನ್ ಐಷಾರಾಮಿ ಬದುಕು ಸಾಗಿಸುತ್ತಿದ್ದಾರೆ ಎಂಬುವುದನ್ನು ಸ್ಪಷ್ಟಪಡಿಸುತ್ತಿರುವ ಫೋಟೋ ಹಾಗೂ ವಿಡಿಯೋ ವೈರಲ್ ಆಗಿದ್ದು, ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಹೀಗಾಗಿ ತನಿಖೆಗೆ ಸೂಚಿಸಿದೆ. ಈ ಮಧ್ಯೆ ದರ್ಶನ್ ಆಂಡ್ ಗ್ಯಾಂಗ್ ನ್ನು ಬೇರೆ ಜೈಲಿಗೆ ಶಿಫ್ಟ್ ಮಾಡಲಾಗುತ್ತಿದೆ. ದರ್ಶನ್ ಗೆ ಜೈಲಿನಲ್ಲಿ ಸ್ಪೇಷಲ್ ಟ್ರೀಟ್ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭವಾಗಿದೆ.
ಹೀಗಾಗಿ ಜೈಲಿಗೆ ಬೇಗೂರು ಇನ್ಸಪೆಕ್ಟರ್ ಕೃಷ್ಣ ಕುಮಾರ್ (Begur Inspector Krishna Kumar) ಆಗಮಿಸಿದ್ದು, ಲಾನ್ ನಲ್ಲಿ ಕುಳಿತಿದ್ದ ವಿಚಾರಕ್ಕೆ ಸಂಬಂಧಿಸಿ ತನಿಖೆ ಕೈಗೊಂಡಿದ್ದಾರೆ. ಬಂಧನಕ್ಕೆ ಒಳಗಾಗಿರುವ ನಟ ದರ್ಶನ್ ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಿರುವುದರಿಂದ ಬುಧವಾರ ಮಧ್ಯಾಹ್ನ ಬಳಿಕ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗುತ್ತಿದೆ. ಈಗಾಗಲೇ ದರ್ಶನ್ ಜೈಲು ಸಿಬ್ಬಂದಿ ಜೊತೆ ದುಃಖ ವ್ಯಕ್ತಪಡಿಸಿದ್ದಾರೆ. ಇದೆಲ್ಲಾ ಬೇಕಿತ್ತಾ ನಂಗೆ ಎಂದು ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್ ರಾಜಾತಿಥ್ಯ ವಿಚಾರಣೆ ಪ್ರಾರಂಬವಾಡಿದೆ. ವಿಡಿಯೋ ಕಾಲ್ ಬಗ್ಗೆಯೂ ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗಿದೆ. ಹುಳಿಮಾವು ಇನ್ಸ್ ಪೆಕ್ಟರ್ ಕುಮಾರಸ್ವಾಮಿ ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ದರ್ಶನ್ ಮೊಬೈಲ್ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.
ನನ್ನ ಪಾಡಿಗೆ ನಾನು ನನ್ನ ಕೊಠಡಿಯಲ್ಲಿ ಕುಳಿತಿದ್ದೆ. ಏಕಾಏಕಿ ನನ್ನ ಕೊಠಡಿಗೆ ಒರ್ವ ವ್ಯಕ್ತಿ ಬಂದಿದ್ದರು. ಬಾಸ್ ನಿಮ್ಮ ಅಭಿಮಾನಿ ಬಾಸ್ ಪ್ಲೀಸ್ ಒಮ್ಮೆ ಮಾತಾಡಿ ಅಂದ್ರು. ಅಭಿಮಾನಿ ಅಲ್ವಾ ಅಂತ ನಾನು ಊಟ ಆಯ್ತಾ ಅಂದೆ. ಹೇಗಿದ್ದೀರಾ ಬಾಸ್ ಅಂದ ನಾನು ಆರಾಮಾಗಿ ಇದ್ದೀನಿ ಅಂದೆ. ಅದು ಬಿಟ್ಟರೇ ನನಗೂ ಆ ವಿಡಿಯೋ ಕಾಲ್ ಗೂ ಸಂಬಂಧ ಇಲ್ಲ ಎಂದು ಹೇಳಿದ್ದಾರೆ. ಬಂದ ವ್ಯಕ್ತಿ ರೌಡಿಶೀಟರ್ ಅನ್ನೋದು ನನಗೆ ಗೊತ್ತಿಲ್ಲ. ನಾನು ಜೈಲಿನಲ್ಲಿ ಯಾವುದೇ ಮೊಬೈಲ್ ಬಳಕೆ ಮಾಡ್ತಾ ಇಲ್ಲ. ಫೋನ್ ನಲ್ಲಿ ಮಾತನಾಡಿದ ವ್ಯಕ್ತಿಯೂ ಯಾರು ಅನ್ನೋದು ಗೊತ್ತಿಲ್ಲ ಎಂದು ಹೇಳಿದ್ದಾರೆ.
ಲಾನ್ ನಲ್ಲಿ ಸಿಗರೇಟ್ ಸೇದಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಹುಡುಗರು ಕ್ರಿಕೆಟ್ ಆಡುತ್ತಿದ್ದರು. ನಾನು ನಿತ್ಯ ಅದನ್ನು ನೋಡುತ್ತಿದ್ದೆ. ಅಂದು ಕೂಡ ನನ್ನ ಪಾಡಿಗೆ ಸಿಗರೇಟ್ ಸೇದುತ್ತಾ ಕ್ರಿಕೆಟ್ ಆಡೋದನ್ನು ನೋಡುತ್ತಿದ್ದೆ. ಈ ವೇಳೆ ನಾಗ ಮತ್ತೆ ಆತನ ಸ್ನೇಹಿತ ಬಂದ. ನಾನು ಸಿಗರೇಟ್ ಸೇದುತ್ತಾ ಅವರ ಬಳಿ ಬಂದು ಕುಳಿತಿದ್ದೇನೆ ಅಷ್ಟೆ. ಯಾವ ಉದ್ಧೇಶ ಕೂಡ ಇಲ್ಲ ಎಂದು ಹೇಳಿದ್ದಾರೆ. ಸದ್ಯ ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ಸತ್ಯ ಏನು ಎಂಬುವುದು ಸದ್ಯದಲ್ಲಿಯೇ ಬಹಿರಂಗವಾಗಲಿದೆ.