ಕುಂದಾಪುರ: ಚಿಲ್ಲರೆ ಇಲ್ಲ ಎಂಬ ಕಾರಣಕ್ಕೆ ದಲಿತ ಯುವತಿಯ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿರುವ ಆರೋಪವೊಂದು ಕೇಳಿ ಬಂದಿದೆ.
ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಾವಿನಕಟ್ಟೆಯ ಮೆಡಿಕಲ್ ಶಾಪ್ ನಲ್ಲಿ ಈ ಘಟನೆ ನಡೆದಿದೆ. ಲಕ್ಷ್ಮೀ ಹಲ್ಲೆಗೊಳಗಾಗಿರುವ ಯುವತಿ. ಸೋಮವಾರ ಮಧ್ಯಾಹ್ನ ಯಾಸ್ಮಿನ್ ಎಂಬ ಮಹಿಳೆ ಮೆಡಿಕಲ್ ಶಾಪ್ ಗೆ ಬಂದು ಔಷಧಿ ಖರೀದಿಸಿ 500 ರೂ. ನೋಟ್ ನೀಡಿದ್ದಾರೆ. ಆಗ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮೀ ಚಿಲ್ಲರೆ ಕೊಡುವಂತೆ ಮನವಿ ಮಾಡಿದ್ದಾರೆ. ಯಾಸ್ಮಿನ್ ಚಿಲ್ಲರೆ ಇಲ್ಲ ಅಂದಾಗ ಲಕ್ಷ್ಮೀ, ಆನ್ ಲೈನ್ ಮೂಲಕ ಪಾವತಿಸುವಂತೆ ಹೇಳಿದ್ದಾರೆ. ಈ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಆಗ ಯಾಸ್ಮಿನ್, ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಸದ್ಯ ಯುವತಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.