ಬೆಂಗಳೂರು: ವಿಧಾನಮಂಡಲದ ಚಳಿಗಾಲದ ಅಧಿವೇಶನ ಡಿ. 9ರಿಂದ ಡಿ. 20ರ ವರೆಗೆ ನಡೆಯಲಿದೆ.
ಚಳಿಗಾಲದ ಅಧಿವೇಶನ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ (Suvarna Soudha) ನಡೆಯಲಿದೆ. ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಅಧಿವೇಶನ ಕರೆದಿದ್ದಾರೆ. ಡಿಸೆಂಬರ್ 9 ಸೋಮವಾರ ಬೆಳಗ್ಗೆ 11 ಗಂಟೆಗೆ ಅಧಿವೇಶನ ಆರಂಭವಾಗಲಿದೆ.
ಇತ್ತೀಚಿಗಷ್ಟೇ ಸುವರ್ಣ ವಿಧಾನಸೌಧಕ್ಕೆ ವಿಧಾಸಭಾಧ್ಯಕ್ಷ ಯು.ಟಿ ಖಾದರ್ ಮತ್ತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಭೇಟಿ ನೀಡಿ ಅಧಿಕಾರಿಗಳ ಸಭೆ ಕರೆದು, ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಿದ್ದರು.
ಈ ಬಾರಿಯ ಅಧಿವೇಶನಕ್ಕೆ ದೊಡ್ಡ ಕೋಲಾಹಲಕ್ಕೆ ಕಾರಣವಾಗಬಹುದು. ಆಡಳಿತ ಪಕ್ಷವನ್ನು ಹಣೆಯಲು ಬಿಜೆಪಿ ಹಾಗೂ ಜೆಡಿಎಸ್ ಸಾಕಷ್ಟು ಅಸ್ತ್ರಗಳನ್ನು ಸಿದ್ಧ ಮಾಡಿಕೊಂಡಿವೆ. ಮುಡಾ ಹಗರಣ, ವಕ್ಫ್, ರೇಷನ್ ಕಾರ್ಡ್ ಸೇರಿದಂತೆ ರಾಜ್ಯ ಸರ್ಕಾರದ ಮೇಲೆ ಬ್ರಹ್ಮಾಸ್ತ್ರ ಹೂಡಲು ವಿಪಕ್ಷಗಳು ಸಜ್ಜಾಗಿವೆ. ಇದಕ್ಕೆ ತಕ್ಕ ಉತ್ತರ ನೀಡಲು ಸರ್ಕಾರ ಕೂಡ ಮುಂದಾಗಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಹಿರಿಯ ನಾಯಕರ ಸಭೆ ನಡೆಸಿ ವಿಪಕ್ಷಗಳ ಮಾತಿಗೆ ಯಾವ ರೀತಿ ತಿರುಗೇಟು ನೀಡಬೇಕು ಎಂಬ ಕುರಿತು ಚರ್ಚಿಸಿದ್ದಾರೆ.