ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಡಿ. 9 ರಿಂದ ಹತ್ತು ದಿನಗಳ ಕಾಲ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದ್ದು, ಸಕಲ ಸಿದ್ಧತೆ ನಡೆದಿದೆ.
ಈ ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ವಿಪಕ್ಷಗಳು, ಅಧಿಕಾರಿಗಳು ಬೆಳಗಾವಿಯತ್ತ ಮುಖ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ತಮ್ಮ ಎರಡನೇ ಅವಧಿಯ ಎರಡನೇ ಅಧಿವೇಶನ ನಡೆಸಲು ಸಿದ್ಧರಾಗಿದ್ದಾರೆ. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ತಯಾರಿ ಮಾಡಿಕೊಂಡಿವೆ.
ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಶನಿವಾರ ಪರಿಶೀಲನೆ ನಡೆಸಿತು. ಸುವರ್ಣ ವಿಧಾನ ಸೌಧದಲ್ಲಿ ಉಭಯ ಕಲಾಪಗಳ ಸಿದ್ಧತೆ, ಸಿಎಂ, ಸ್ಪೀಕರ್, ಸಚಿವರು, ಶಾಸಕರು, ಸಚಿವಾಲಯ ಮಟ್ಟದ ಅಧಿಕಾರಿಗಳು ಸೇರಿ ಒಟ್ಟು 12000 ಸಿಬ್ಬಂದಿಗಳಿಗೆ ಅಗತ್ಯವಿರುವ ಊಟ, ವಸತಿ ಮತ್ತು ವಾಹನದ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಅಲ್ಲದೇ, ಅಧಿವೇಶನದ ಸಿದ್ಧತೆ ಕುರಿತು ಖುದ್ದು ಸಿಎಂ ಸಿದ್ದರಾಮಯ್ಯ ಕೂಡ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ಪ್ರತಿಭಟನೆ ನಡೆಸಲು ಕೂಡ ತಯಾರಿ ನಡೆಯುತ್ತಿವೆ. ಅಧಿವೇಶನದ ಮೊದಲ ದಿನವೇ ಸರ್ಕಾರದ ವಿರುದ್ಧ ಪರ್ಯಾಯವಾಗಿ ನಾಡದ್ರೋಹಿ ಎಂಇಎಸ್ ಮಹಾಮೇಳಕ್ಕೆ ಮುಂದಾಗಿದೆ.
ಹತ್ತು ದಿನಗಳ ಚಳಿಗಾಲದ ಅಧಿವೇಶನದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಆರು ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. 6 ಜನ ಎಸ್ಪಿ, ಹತ್ತು ಜನ ಹೆಚ್ಚುವರಿ ಎಸ್ಪಿ ಸೇರಿ 35ಕೆಎಸ್ ಆರ್ ಪಿ ತುಕಡಿ ನಿಯೋಜಿಸಲಾಗಿದೆ. 450ಕ್ಕೂ ಅಧಿಕ ಸಿಸಿ ಕ್ಯಾಮರಾಗಳನ್ನು ಕೂಡ ಅಳವಡಿಸಲಾಗಿದೆ. ಈ ಬಾರಿ ಸುಮಾರು 20 ಕೋಟಿ ರೂ. ನಷ್ಟು ಅಧಿವೇಶನಕ್ಕೆ ಖರ್ಚಾಗುವ ಸಾಧ್ಯತೆ ಇದೆ.