ದಾವಣಗೆರೆ : ದೇಶದ ವಿವಿಧ ಭಾಗಗಳ ಜನರ ಬ್ಯಾಂಕ್ ಖಾತೆಯಿಂದ ಹಣ ಕಳ್ಳತನ ಮಾಡುತ್ತಿದ್ದ ಸೈಬರ್ ವಂಚಕನನ್ನು ದಾವಣಗೆರೆ ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ಖಾತೆಯ ಕೋಟಿ ಕೋಟಿ ವಹಿವಾಟು ನೋಡಿ ಪೊಲೀಸರೇ ದಂಗಾಗಿ ಹೋಗಿದ್ದು, ಕಾರ್ಯಾಚರಣೆಯಲ್ಲಿ ಬರೋಬ್ಬರಿ 150 ಕೋಟಿ ರೂಪಾಯಿ ವಂಚನೆಯ ಜಾಲವನ್ನು ಪತ್ತೆ ಹಚ್ಚಿದ್ದಾರೆ. ಬಂಧಿತನನ್ನು ಪ್ರಕರಣದ ಎರಡನೇ ಆರೋಪಿ ಸೈಯದ್ ಅರ್ಫಾತ್ (28) ಎಂದು ಗುರುತಿಸಲಾಗಿದೆ.
ಈತ ಹಾಸನ ಜಿಲ್ಲೆಯ ಬೇಲೂರು ಟೌನ್ ಶಾಂತಿನಗರ ನಿವಾಸಿಯಾಗಿದ್ದು, ಸಿಸಿಟಿವಿ ಕೆಲಸ ಮಾಡಿಕೊಂಡಿದ್ದ. ಇನ್ನೂ ತಲೆ ಮರೆಸಿಕೊಂಡಿರುವ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಆರೋಪಿಯ ಮೊಬೈಲ್ ವಶಪಡಿಸಿಕೊಂಡು ಪರಿಶೀಲನೆ ನಡೆಸಿದಾಗ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಆರೋಪಿತರ ಖಾತೆಯಲ್ಲಿ ಜುಲೈ 27 ರಿಂದ ಆಗಸ್ಟ್ 19 ರವರೆಗೆ ಸುಮಾರು 150 ಕೋಟಿ ರೂ. ಆನ್‌ಲೈನ್ ವಂಚನೆಯ ಹಣ ಜಮೆಯಾಗಿದೆ. ಆರೋಪಿಗಳು 132 ಕೋಟಿ ರೂ. ಹಣ ವಿತ್ ಡ್ರಾ ಮಾಡಿದ್ದು, ಖಾತೆಯಲ್ಲಿ 18 ಕೋಟಿ ರೂ. ಹಾಗೆ ಇದೆ. ಆ ಖಾತೆಗಳನ್ನು ಪೊಲೀಸರು ಫ್ರೀಜ್ ಮಾಡಿದ್ದಾರೆ.
ಆರೋಪಿಗಳು ದಾವಣಗೆರೆ ನಗರದ ನಿಟ್ಟುವಳ್ಳಿ ಕೆನರಾ ಬ್ಯಾಂಕ್ ಖಾತೆಯಿಂದ ಪ್ರಮೋದ್ ಎಂಬುವರ 52,60, 523 ರೂ.ಹಣವನ್ನು ಎಗರಿಸಿದ್ದರು. ಈ ಸಂಬಂಧ ದಾವಣಗೆರೆ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ಬಳಿಕ ಆರೋಪಿಯನ್ನು ವಶಕ್ಕೆ ಪಡೆಯುತ್ತಿದ್ದಂತೆ ಆತನ ಮೊಬೈಲ್ ಪರಿಶೀಲನೆ ವೇಳೆ ಬಹುದೊಡ್ಡ ಪ್ರಕರಣದ ರಹಸ್ಯ ಬಯಲಾಗಿದೆ. ಸದ್ಯ ಸೈಬರ್ ಕ್ರೈಮ್ ಪೊಲೀಸರ ಸಾಧನೆಗೆ ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.