ಬೆಂಗಳೂರು: ನೀವು ಈಗಾಗಲೇ ಪ್ರಾಥಮಿಕ, ಹೈಯರ್ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದೀರಾ? ಅಥವಾ ಈಗಷ್ಟೇ ಕೋರ್ಸ್ ಮುಗಿಸಿ, ಒಮ್ಮೆಯೇ 9-12ನೇ ತರಗತಿ ಮಕ್ಕಳಿಗೆ ಪಾಠ ಮಾಡಲು ಇಚ್ಛಿಸುತ್ತಿದ್ದೀರಾ? ಹಾಗಾದರೆ, ನಿಮಗೊಂದು ಇಲ್ಲಿ ಶುಭ ಸುದ್ದಿ ಇದೆ. ಹೌದು, ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್ ಇ) ಶಾಲೆಗಳಲ್ಲಿ 9-12ನೇ ತರಗತಿ ವಿದ್ಯಾರ್ಥಿಗಳಿಗೆ ಬೋಧಿಸುವವರಿಗೆ ಕೇಂದ್ರ ಸರ್ಕಾರವು ಶೀಘ್ರವೇ ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು (ಸಿಟಿಇಟಿ) ಕಡ್ಡಾಯಗೊಳಿಸಲಿದೆ ಎಂದು ತಿಳಿದುಬಂದಿದೆ.
ಸಿಬಿಎಸ್ಇ ಸಂಯೋಜಿತ ಶಾಲೆಗಳು, ಅಂದರೆ, ಕೇಂದ್ರೀಯ ವಿದ್ಯಾಲಯ, ನವೋದಯದಂತಹ ಶಾಲೆಗಳಲ್ಲಿ 9-12ನೇ ತರಗತಿ ಮಕ್ಕಳಿಗೆ ಬೋಧಿಸುವವರಿಗೆ ಸಿಟಿಇಟಿ ಇನ್ನುಮುಂದೆ ಕಡ್ಡಾಯವಾಗಲಿದೆ. ನೇರವಾಗಿ ಸಿಟಿಇಟಿ ಮೂಲಕವೇ ಆಯ್ಕೆಯಾಗುವ ಅವಕಾಶ ಇರುವುದರಿಂದ ಅಭ್ಯರ್ಥಿಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದೇ ಹೇಳಲಾಗುತ್ತಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಇದನ್ನು ಜಾರಿಗೆ ತರಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಇದು ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಯನ್ನು ತರಲಿದೆ. ಈ ಹೊಸ ನಿಯಮವು ಸಿಬಿಎಸ್ಇ ಸಂಯೋಜಿತ ಶಾಲೆಗಳಿಗೆ ಅನ್ವಯಿಸುತ್ತದೆ. ಸಿಟಿಇಟಿ ಎಂಬುದು ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ (ಎನ್ ಸಿ ಟಿ ಇ) ಮತ್ತು ಸಿಬಿಎಸ್ಇ ಜಂಟಿಯಾಗಿ ನಡೆಸುವ ರಾಷ್ಟ್ರೀಯ ಮಟ್ಟದ ಅರ್ಹತಾ ಪರೀಕ್ಷೆ. ಇದು ಶಿಕ್ಷಕರ ಗುಣಮಟ್ಟವನ್ನು ನಿರ್ಧರಿಸುವ ಉದ್ದೇಶ ಹೊಂದಿದೆ. ಇದನ್ನು ಈಗ 9-12ನೇ ತರಗತಿಯಲ್ಲಿ ಬೋಧಿಸುವವರಿಗೂ ಕಡ್ಡಾಯಗೊಳಿಸಿರಲಿಲ್ಲ.
ಸಿಬಿಎಸ್ಇ ಹೊಸ ನಿಯಮವು ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟವನ್ನು ಉನ್ನತೀಕರಿಸುವ ದಿಸೆಯಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ. 9 ರಿಂದ 12ನೇ ತರಗತಿಯ ಶಿಕ್ಷಕರಿಗೆ ಸಿಟಿಇಟಿ ಪರೀಕ್ಷೆ ಕಡ್ಡಾಯವಾದರೆ, ಅದು ಉತ್ತಮ ಶಿಕ್ಷಕರನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ. ಈ ಬದಲಾವಣೆಯು ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ಹೇಳಲಾಗುತ್ತಿದೆ.



















