ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಹರಾಜಿಗೂ ಮುನ್ನ, ಪ್ರಮುಖ ಆಟಗಾರರಾದ ವಿಜಯ್ ಶಂಕರ್, ರಾಹುಲ್ ತ್ರಿಪಾಠಿ, ಸ್ಯಾಮ್ ಕರ್ರನ್ ಮತ್ತು ಡೆವೊನ್ ಕಾನ್ವೆ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗುತ್ತಿದೆ ಎಂಬ ವರದಿಗಳ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ (CSK) ಫ್ರಾಂಚೈಸಿ ಕೊನೆಗೂ ಮೌನ ಮುರಿದಿದೆ. ಆಟಗಾರರ ಬಿಡುಗಡೆ ಪಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ, ಸಿಎಸ್‌ಕೆ ತನ್ನ ಅಧಿಕೃತ ‘X’ ಖಾತೆಯ ಮೂಲಕ ಈ ಬಗ್ಗೆ ಸ್ಪಷ್ಟನೆ ನೀಡಿದೆ.
ಐಪಿಎಲ್ 2025ರ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅಂಕಪಟ್ಟಿಯಲ್ಲಿ ಹತ್ತನೇ ಸ್ಥಾನಕ್ಕೆ ಕುಸಿದು ಹೀನಾಯ ಪ್ರದರ್ಶನ ನೀಡಿತ್ತು. ಆಡಿದ 14 ಪಂದ್ಯಗಳಲ್ಲಿ ಕೇವಲ ನಾಲ್ಕರಲ್ಲಿ ಜಯ ಸಾಧಿಸಿ, 10ರಲ್ಲಿ ಸೋಲು ಕಂಡಿತ್ತು. ಇದು ಐಪಿಎಲ್ ಇತಿಹಾಸದಲ್ಲಿಯೇ ಸಿಎಸ್‌ಕೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದ ಮೊದಲ ನಿದರ್ಶನವಾಗಿತ್ತು. ಅಲ್ಲದೆ, ಸತತ ಎರಡು ಸೀಸನ್‌ಗಳಲ್ಲಿ ಪ್ಲೇಆಫ್ ಪ್ರವೇಶಿಸಲು ವಿಫಲವಾದ ಮೊದಲ ಸಂದರ್ಭವೂ ಇದಾಗಿತ್ತು.
ನಾಯಕ ರುತುರಾಜ್ ಗಾಯಕ್ವಾಡ್ ಗಾಯದ ಕಾರಣ ಕೇವಲ 5 ಪಂದ್ಯಗಳನ್ನಷ್ಟೇ ಆಡಿದ್ದರು. ನಂತರ ಎಂ.ಎಸ್. ಧೋನಿ ನಾಯಕತ್ವ ವಹಿಸಿಕೊಂಡರೂ ತಂಡದ ಅದೃಷ್ಟ ಬದಲಾಯಿಸಲು ಸಾಧ್ಯವಾಗಲಿಲ್ಲ. ಜೊತೆಗೆ, 17 ವರ್ಷಗಳ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮತ್ತು 15 ವರ್ಷಗಳ ನಂತರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತವರಿನಲ್ಲಿ ಸೋಲು ಕಂಡಿತ್ತು. ಇದೇ ಮೊದಲ ಬಾರಿಗೆ ಸನ್‌ರೈಸರ್ಸ್ ಹೈದರಾಬಾದ್ ತಂಡವು ಸಿಎಸ್‌ಕೆಯನ್ನು ಅದರ ತವರಿನಲ್ಲೇ ಮಣಿಸಿತ್ತು.
“ಆಟಗಾರರ ಬಿಡುಗಡೆ ವದಂತಿ: ಸಿಎಸ್‌ಕೆ ಸ್ಪಷ್ಟನೆ”
ಇತ್ತೀಚೆಗೆ ‘ಕ್ರಿಕ್‌ಬಝ್’ ವರದಿಯೊಂದರಲ್ಲಿ, ಡಿಸೆಂಬರ್‌ನಲ್ಲಿ ನಡೆಯಲಿರುವ ಐಪಿಎಲ್ 2026 ಹರಾಜಿಗಾಗಿ ಹೆಚ್ಚಿನ ಹಣವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಸಿಎಸ್‌ಕೆ ಕೆಲವು ದೊಡ್ಡ ಹೆಸರುಗಳನ್ನು ಕೈಬಿಡಲು ಯೋಜಿಸುತ್ತಿದೆ ಎಂದು ಉಲ್ಲೇಖಿಸಲಾಗಿತ್ತು. ವರದಿಯ ಪ್ರಕಾರ, ದೀಪಕ್ ಹೂಡಾ, ವಿಜಯ್ ಶಂಕರ್, ರಾಹುಲ್ ತ್ರಿಪಾಠಿ, ಸ್ಯಾಮ್ ಕರ್ರನ್ ಮತ್ತು ಡೆವೊನ್ ಕಾನ್ವೆ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿತ್ತು. ರವಿಚಂದ್ರನ್ ಅಶ್ವಿನ್ ಅವರ ನಿವೃತ್ತಿಯಿಂದ ಸಿಎಸ್‌ಕೆ ಖಾತೆಗೆ ಈಗಾಗಲೇ 9.75 ಕೋಟಿ ರೂ. ಜಮೆಯಾಗಿದೆ.
ಈ ವರದಿ ವೈರಲ್ ಆದ ನಂತರ, ಸಿಎಸ್‌ಕೆ ತನ್ನ ‘X’ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದೆ. “ಚಿಂತಿಸಬೇಡಿ, ನಾವು ಬಯೋ ಅಪ್‌ಡೇಟ್ ಮಾಡಿದ್ದೇವೆ” ಎಂದು ಪೋಸ್ಟ್ ಮಾಡಿದ್ದು, ಹೊಸ ಬಯೋದಲ್ಲಿ ” ಯಾವುದೂ ಅಧಿಕೃತವಲ್ಲ” (“Nothing’s official till you see it here”) ಎಂದು ಬರೆಯಲಾಗಿದೆ. ಈ ಮೂಲಕ, ಆಟಗಾರರ ಬಿಡುಗಡೆ ಕುರಿತ ಯಾವುದೇ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸುವವರೆಗೂ ವದಂತಿಗಳನ್ನು ನಂಬಬಾರದು ಎಂದು ಫ್ರಾಂಚೈಸಿ ಸ್ಪಷ್ಟಪಡಿಸಿದೆ.
“ಎಂ.ಎಸ್. ಧೋನಿ ಬಗ್ಗೆ ಹರ್ಲೀನ್ ಡಿಯೋಲ್ ಮಾತು”
ಇದೇ ವೇಳೆ, ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಹರ್ಲೀನ್ ಡಿಯೋಲ್, ತಮ್ಮ ಮೊಣಕಾಲಿನ ಗಾಯವಾದಾಗ ಎಂ.ಎಸ್. ಧೋನಿ ಅವರೇ ಖುದ್ದಾಗಿ ಕರೆ ಮಾಡಿ ಧೈರ್ಯ ತುಂಬಿದ್ದನ್ನು ಸ್ಮರಿಸಿಕೊಂಡಿದ್ದಾರೆ. “ನಾನು ಗಾಯಗೊಂಡಿದ್ದಾಗ ಅವರು ರಾಂಚಿಯಲ್ಲಿದ್ದರು. ಎಲ್ಲರೂ ಅವರನ್ನು ಭೇಟಿಯಾಗಲು ಬಯಸುತ್ತಿದ್ದರು, ಆದರೆ ನನ್ನ ಗಾಯದ ಬಗ್ಗೆ ತಿಳಿದು ಅವರೇ ನನಗೆ ಕರೆ ಮಾಡಿದರು. ಆ ದೀರ್ಘ ಸಂವಾದ ನನಗೆ ಕಷ್ಟದ ಸಮಯದಲ್ಲಿ ಬಹಳಷ್ಟು ಪ್ರೇರಣೆ ನೀಡಿತು” ಎಂದು ಹರ್ಲೀನ್ ಐಸಿಸಿ ವೀಡಿಯೊದಲ್ಲಿ ಹೇಳಿದ್ದಾರೆ.