ನವದೆಹಲಿ: ರಷ್ಯಾದ ಕಚ್ಚಾ ತೈಲ ಖರೀದಿಗಾಗಿ ಭಾರತದ ಮೇಲೆ ನಿರ್ಬಂಧ ವಿಧಿಸಿರುವ ಅಮೆರಿಕದ ಕ್ರಮ ನ್ಯಾಯಸಮ್ಮತವಲ್ಲ ಎಂದು ರಷ್ಯಾದ ಹಿರಿಯ ರಾಜತಾಂತ್ರಿಕರೊಬ್ಬರು ಹೇಳಿರುವುದಾಗಿ ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ರಷ್ಯಾ ರಾಯಭಾರ ಕಚೇರಿಯ ಉಪ ಮುಖ್ಯಸ್ಥ ರೋಮನ್ ಬಾಬುಷ್ಕನ್ ಈ ಸಂಬಂಧಿಸಿ ಪ್ರತಿಕ್ರಿಯಿಸಿ, ಬಾಹ್ಯ ಒತ್ತಡದ ಹೊರತಾಗಿಯೂ ಭಾರತ-ರಷ್ಯಾ ಇಂಧನ ಸಹಕಾರ ಮುಂದುವರಿಯಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತಕ್ಕೆ ಇದು ಸವಾಲಿನ ಪರಿಸ್ಥಿತಿ. ಆದಾಗ್ಯೂ ಭಾರತ ಹಾಗೂ ರಷ್ಯಾದ ನಡುವೆ ದೀರ್ಘಕಾಲದ ಸಂಬಂಧ ಇರಲಿದೆ ಎನ್ನುವುದರ ಬಗ್ಗೆ ನಂಬಿಕೆ ಇದೆ ಎಂದಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಕೊನೆಗಾಣಿಸಲು ಭಾರತದ ಮೇಲೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಬಂಧ ವಿಧಿಸಿದ್ದಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಹೇಳಿಕೆ ನೀಡಿದ್ದಾರೆ.
ಶ್ವೇತಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಕ್ಯಾರೋಲಿನ್, ‘ಈ ಯುದ್ಧವನ್ನು ಕೊನೆಗಾಣಿಸಲು ಸಾರ್ವಜನಿಕರಿಂದ ಭಾರಿ ಒತ್ತಡವಿತ್ತು. ನೀವು ನೋಡಿರುವಂತೆಯೇ ಭಾರತದ ಮೇಲಿನ ನಿರ್ಬಂಧ ಹಾಗೂ ಇತರೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈ ಯುದ್ಧವನ್ನು ಕೊನೆಗಾಣಿಸಲು ಬಯಸುತ್ತೇವೆ ಎಂದು ಸ್ವತಃ ಟ್ರಂಪ್ ಅವರೇ ನುಡಿದಿದ್ದಾರೆ’ ಎಂದು ಹೇಳಿದ್ದಾರೆ.
‘ಯಾವುದೇ ಸಭೆ ನಡೆಯುವುದಕ್ಕೂ ಮೊದಲು ಇನ್ನೊಂದು ತಿಂಗಳು ಕಾಯಬೇಕು ಎಂಬ ಇತರರ ಸಲಹೆಗಳನ್ನು ಅಧ್ಯಕ್ಷರು ತಿರಸ್ಕರಿಸಿದ್ದಾರೆ. ಆದಷ್ಟು ಬೇಗ ಈ ಯುದ್ಧವನ್ನು ಕೊನೆಗಾಣಿಸಲು ಬಯಸಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.
2022ರ ಫೆಬ್ರುವರಿಯಲ್ಲಿ ಉಕ್ರೇನ್ ಮೇಲಿನ ಆಕ್ರಮಣದ ನಂತರ ಪಾಶ್ಚಿಮಾತ್ಯ ದೇಶಗಳು ರಷ್ಯಾದ ಮೇಲೆ ನಿರ್ಬಂಧಗಳನ್ನು ವಿಧಿಸಿದ ಬೆನ್ನಲ್ಲೇ ಭಾರತವು ರಿಯಾಯಿತಿ ದರದಲ್ಲಿ ರಷ್ಯಾದ ತೈಲವನ್ನು ಖರೀದಿಸಲು ಆರಂಭಿಸಿತ್ತು. ಈ ಪರಿಣಾಮವಾಗಿ 2019-20 ರಲ್ಲಿ ಒಟ್ಟು ತೈಲ ಆಮದುಗಳಲ್ಲಿ ಶೇ 1.7ರಷ್ಟಿದ್ದ ರಷ್ಯಾದ ಪಾಲು 2024-25 ರಲ್ಲಿ ಶೇಕಡಾ 35.1ಕ್ಕೆ ಏರಿಕೆ ಕಂಡಿತು. ಈಗ ರಷ್ಯಾವು ಭಾರತಕ್ಕೆ ಅತಿದೊಡ್ಡ ತೈಲ ಪೂರೈಕೆದಾರ ದೇಶವಾಗಿದೆ.