ಲಕ್ನೋ: ಭಾರತೀಯ ಕ್ರಿಕೆಟಿಗ ರಿಂಕು ಸಿಂಗ್ ಮತ್ತು ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ಅವರ ವಿವಾಹವನ್ನು ಮುಂದೂಡಲಾಗಿದೆ ಎಂದು ವರದಿಯಾಗಿದೆ. ಈ ಜೋಡಿ ಜೂನ್ 8 ರಂದು ಉತ್ತರ ಪ್ರದೇಶದ ಲಕ್ನೋದಲ್ಲಿ ಅದ್ಧೂರಿ ಸಮಾರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಮೂಲಗಳ ಪ್ರಕಾರ, ನವೆಂಬರ್ 19ರಂದು ವಾರಣಾಸಿಯ ತಾಜ್ ಹೋಟೆಲ್ನಲ್ಲಿ ಮದುವೆಗೆ ಕುಟುಂಬವು ಬುಕ್ ಮಾಡಿತ್ತು. ಆದರೆ, ಭಾರತೀಯ ಕ್ರಿಕೆಟ್ ತಂಡದೊಂದಿಗಿನ ರಿಂಕು ಅವರ ಬದ್ಧತೆಗಳಿಂದಾಗಿ ವಿವಾಹವನ್ನು ಮುಂದೂಡಲು ನಿರ್ಧರಿಸಲಾಗಿದೆ ಎಂದು ಅಮರ್ ಉಜಾಲ ಪತ್ರಿಕೆ ವರದಿ ಮಾಡಿದೆ. ಈಗ ಮದುವೆಯು ಫೆಬ್ರವರಿ 2026 ರಲ್ಲಿ ನಡೆಯಲಿದ್ದು, ನಿಖರವಾದ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ.
ನಿಶ್ಚಿತಾರ್ಥದಲ್ಲಿ ಗಣ್ಯರ ದಂಡು:
ರಿಂಕು-ಪ್ರಿಯಾ ನಿಶ್ಚಿತಾರ್ಥ ಸಮಾರಂಭದಲ್ಲಿ ಮಾಜಿ ಕ್ರಿಕೆಟಿಗರಾದ ಪ್ರವೀಣ್ ಕುಮಾರ್ ಮತ್ತು ಪಿಯೂಷ್ ಚಾವ್ಲಾ, ಉತ್ತರ ಪ್ರದೇಶ ರಣಜಿ ತಂಡದ ನಾಯಕ ಆರ್ಯನ್ ಜುಯಾಲ್ ಸೇರಿದಂತೆ ಕ್ರೀಡಾ ಗಣ್ಯರು ಭಾಗವಹಿಸಿದ್ದರು. ಇದರ ಜೊತೆಗೆ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಸಂಸದೆ ಡಿಂಪಲ್ ಯಾದವ್ ಮತ್ತು ಪ್ರಿಯಾ ಸರೋಜ್ ಅವರ ಗೆಳತಿ, ಸಂಸದೆ ಇಕ್ರಾ ಹಸನ್ ಸೇರಿದಂತೆ ಹಲವು ರಾಜಕೀಯ ಗಣ್ಯರು ಉಪಸ್ಥಿತರಿದ್ದರು.
ಪ್ರಿಯಾ ಸರೋಜ್ ಪರಿಚಯ:
ಪ್ರಿಯಾ ಸರೋಜ್ ಅವರು ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಮಚ್ಲಿಶಹರ್ ಕ್ಷೇತ್ರದಿಂದ ಸಮಾಜವಾದಿ ಪಕ್ಷದಿಂದ (ಎಸ್ಪಿ) ಸ್ಪರ್ಧಿಸಿ, ಬಿಜೆಪಿ ಸಂಸದ ಭೋಲಾನಾಥ್ ಅವರನ್ನು 35,850 ಮತಗಳ ಅಂತರದಿಂದ ಸೋಲಿಸಿ ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ನವೆಂಬರ್ 23, 1998 ರಂದು ಜನಿಸಿದ ಪ್ರಿಯಾ, ಸುಪ್ರೀಂ ಕೋರ್ಟ್ನಲ್ಲಿ ವಕೀಲರಾಗಿಯೂ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.
ರಿಂಕು ಸಿಂಗ್ ಅವರ ಕ್ರಿಕೆಟ್ ವೃತ್ತಿಜೀವನ:
ರಿಂಕು ಸಿಂಗ್ ಭಾರತ ಪರ ಎರಡು ಏಕದಿನ ಮತ್ತು 33 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ಏಕದಿನದಲ್ಲಿ 55 ರನ್ ಗಳಿಸಿದ್ದು, ಟಿ20ಯಲ್ಲಿ 46.1 ಸರಾಸರಿಯಲ್ಲಿ 546 ರನ್ ಗಳಿಸಿದ್ದಾರೆ. ಅವರು ಶಾರ್ಟ್ ಫಾರ್ಮೆಟ್ನಲ್ಲಿ ಉತ್ತಮ ಫಿನಿಶರ್ ಎಂದು ಗುರುತಿಸಿಕೊಂಡಿದ್ದಾರೆ.