ಬೆಂಗಳೂರು: ದಾದಾ ಎಂದೇ ಕರೆಸಿಕೊಳ್ಳುತ್ತಿದ್ದ ಎಡಗೈ ಬ್ಯಾಟರ್ ಸೌರವ್ ಗಂಗೂಲಿ (Sourav Ganguly) ಟೀಮ್ ಇಂಡಿಯಾದ ಅತ್ಯುತ್ತಮ ನಾಯಕರಲ್ಲಿ ಒಬ್ಬರು. ಭಾರತೀಯ ಕ್ರಿಕೆಟ್ ತಂಡಕ್ಕೆ ಹೊಸ ಕಳೆ ತಂದುಕೊಟ್ಟವರು. ಜಿದ್ದಾಜಿದ್ದಿನ ಹೋರಾಟಕ್ಕೆ ಕಿಚ್ಚು ಹಚ್ಚಿದವರು ಅವರು. ಮಹೇಂದ್ರ ಸಿಂಗ್ ಧೋನಿ, ಯುವರಾಜ್ ಸಿಂಗ್, ಮತ್ತು ಹರ್ಭಜನ್ ಸಿಂಗ್(Harbhajan Singh) ಅವರಂತಹ ಸ್ಟಾರ್ ಆಟಗಾರರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪರಿಚಯಿಸಿದ್ದೇ ಈ ಮಹಾ ನಾಯಕ.
ಭಾರತ ತಂಡ ವಿದೇಶದ ತಂಡಗಳ ವಿರುದ್ಧ ಹೆದರಿಕೊಂಡು ಆಡುವ ಅಭ್ಯಾಸವನ್ನು ಕೊನೆಗೊಳಿಸಿದವರೇ ಅವರು. ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ್ದರಿಂದ ವಿದೇಶಿ ನೆಲದಲ್ಲಿ ಗೆದ್ದು ಬೀಗುತ್ತಿತ್ತು. ಇಂಥ ಆಟಗಾರನ ಬಯೋಪಿಕ್ ನಿರ್ಮಾಣಕ್ಕೆ ಬಾಲಿವುಡ್ ಸಜ್ಜಾಗಿದೆ. ಗಂಗೂಲಿ ಪಾತ್ರವನ್ನು ಯಾರು ನಿರ್ವಹಿಸುತ್ತಾರೆ ಎಂಬುದು ಕುತೂಹಲಕರ ಪ್ರಶ್ನೆಯಾಗಿದೆ. ಪ್ರಸ್ತುತ ವರದಿಗಳ ಪ್ರಕಾರ, ಖ್ಯಾತ ಬಾಲಿವುಡ್ ನಟ ರಾಜ್‌ಕುಮಾರ್ ರಾವ್‌ಗೆ (Rajkumar Rao) ಅವಕಾಶಗಳು ಸಿಗಬಹುದು.
ಗಂಗೂಲಿ ಬಯೋಪಿಕ್ಗೆ ಯಾರ ಯೋಜನೆ?
ಗಂಗೂಲಿ ಜೀವನಾಧಾರಿತ ಈ ಚಿತ್ರವನ್ನು ಲವ್ ರಂಜನ್ ನಿರ್ಮಿಸಲಿದ್ದಾರೆ ಎನ್ನಲಾಗುತ್ತಿದೆ. ವಿಕ್ರಮಾದಿತ್ಯ ಮೋಟ್ವಾನೆ ನಿರ್ದೇಶನಕ್ಕೆ ಮುಂದಾಗಿದ್ದಾರೆ ಎಂಬುದಾಗಿ ಬಾಲಿವುಡ್ ಬೀದಿಯಲ್ಲಿ ಸುದ್ದಿಯಾಗಿದೆ. ಅಂದ ಹಾಗೆ 2021ರಲ್ಲಿಯೇ ಗಂಗೂಲಿ ಅವರೇ ಈ ಬಯೋಪಿಕ್ ಅನ್ನು ಘೋಷಿಸಲಾಗಿತ್ತು. ಆದರೆ ತಾಂತ್ರಿಕ ಕಾರಣಕ್ಕೆ ಸೆಟ್ಟೇರಿರಲಿಲ್ಲ. ಇದೀಗ ಆ ಯೋಜನೆಗೆ ಜೀವ ಬಂದಿದೆ.
ಈ ಹಿಂದೆ, ರಾಜ್‌ಕುಮಾರ್ ರಾವ್ ಅವರಿಗಿಂತ ಮೊದಲು ಗಂಗೂಲಿ ಬಯೋಪಿಕ್ ರೇಸ್‌ನಲ್ಲಿ ನಟಿಸಲು ಇಬ್ಬರು ಬಾಲಿವುಡ್ ಸೂಪರ್‌ಸ್ಟಾರ್‌ಗಳ ಹೆಸರು ಕೇಳಿಬಂದಿತ್ತು. ಆಯುಷ್ಮಾನ್ ಖುರಾನಾ ಮತ್ತು ರಣಬೀರ್ ಕಪೂರ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆಯುಷ್ಮಾನ್ ಸಹ ಈ ಚಿತ್ರದ ಬಗ್ಗೆ ಸಂತಸ ವ್ಯಕ್ತಪಡಿಸಿ ಅಧಿಕೃತವಾಗಿ ಸಹಿ ಕೂಡ ಹಾಕಿದ್ದರು. ಬಳಿಕ ಆಯುಷ್ಮಾನ್ ಹಿಂದೆ ಸರಿದಿದ್ದರು. ವಇದಾದ ನಂತರ ರಣಬೀರ್ ಕಪೂರ್ ಕೇಳಿ ಬಂತು.
ಸಿನಿಮಾವೊಂದರ ಪ್ರಚಾರದಲ್ಲಿ ಗಂಗೂಲಿ ಜೊತೆ ಅವರು ಕಾಣಿಸಿಕೊಂಡಿದ್ದು ಸುದ್ದಿಗೆ ಪುಷ್ಠಿ ಕೊಟ್ಟಿತ್ತು. ಅಂತಿಮವಾಗಿ ರಾಜ್ ಕುಮಾರ್ ರಾವ್ ಹೆಸರು ಮುನ್ನೆಲೆಗೆ ಬಂದಿದೆ. ಯಾವಾಗ ಸೆಟ್ಟೇರುತ್ತದೆ, ಯಾರು ನಟಿಸಲಿದ್ದಾರೆ ಎಂಬುದರ ಕುರಿತು ಯಾವುದೇ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.