ಪುತ್ತೂರು: ಹಟ್ಟಿಯಿಂದ ಗೋವನ್ನು ಕದ್ದು,ಕಡಿದು ಮಾಂಸ ಸಾಗಾಟ ಮಾಡಿದ್ದಾರೆ. ಇದೊಂದು ಅತ್ಯಂತ ಕ್ರೌರ್ಯದ ಕೃತ್ಯವಾಗಿದೆ ಈ ಕೃತ್ಯವನ್ನು ಹಿಂದೂ ಜಾಗರಣ ವೇದಿಕೆ ತೀವ್ರವಾಗಿ ಖಂಡಿಸುತ್ತದೆ. ಜಿಲ್ಲೆಯ ಎಲ್ಲಾ ಗೋಸಾಗಾಟಕಾರರನ್ನು ಗಡಿಪಾರು ಮಾಡಿ ಎಂದು ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನರಸಿಂಹ ಮಾಣಿ, ಮುಸಲ್ಮಾನರ ಹಬ್ಬದ ಹಿಂದಿನ ದಿನವೇ ಈ ಕೃತ್ಯ ಎಸಗಲಾಗಿದೆ. ಯಾರದ್ದೋ ಮನೆಯ ಗೋವುಗಳ ಕದ್ದು ಹಬ್ಬ ಮಾಡುವ ಇವರಿಗೆ ಯೋಗ್ಯತೆ ಇದೆಯೇ ? ಈ ಕೃತ್ಯವನ್ನು ಯಾಕೆ ಯಾವೊಬ್ಬ ಮೌಲ್ವಿಯೂ, ಧರ್ಮ ಗುರುವೂ ಪ್ರಶ್ನಿಸುವುದಿಲ್ಲ.? ಮಾತೆತ್ತಿದರೆ ಕೋಮು ಸಾಮರಸ್ಯದ ಬಗ್ಗೆ ಮಾತನಾಡುವ ಇವರು, ಹಿಂದೂಗಳ ಭಾವನೆಗೆ ನೋವಾದಾಗ ಯಾರು ಮಾತನಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೂಗಳ ಶ್ರದ್ಧಾಬಿಂದುವಾಗಿರುವ ಗೋವುಗಳ ಹತ್ಯೆ ಮಾಡಲಾಗುತ್ತಿದ್ದು, ಪೋಲೀಸರು ಇದನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ. ಧಾರ್ಮಿಕ ಕಾರ್ಯಕ್ರಮಗಳಿಗೆ ಸುಪ್ರೀಂ ಕೋರ್ಟ್ ಆದೇಶ ಎಂದು ಪೋಲೀಸರು ತಡೆಯೊಡ್ಡುತ್ತಿದ್ದಾರೆ. ಅದೇ ರೀತಿ ಸುಪ್ರೀಂ ಕೋರ್ಟ್ ಗೋಹತ್ಯೆಯನ್ನು ನಿಷೇಧಿಸಿದೆ. ರಾಜ್ಯದಲ್ಲಿ ಗೋಹತ್ಯೆ ವಿರೋಧಿ ಕಾನೂನು ಇದೆ. ಪೋಲೀಸರು ಯಾಕೆ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ರಾಜ್ಯದ ಮುಖ್ಯಮಂತ್ರಿಯೇ ನಾನು ಗೋಮಾಂಸ ತಿನ್ನುತ್ತೇನೆ ಎನ್ನುತ್ತಾರೆ. ಹೀಗಿರುವಾಗ ಪೋಲೀಸರು ಯಾವ ರೀತಿ ಕರ್ತವ್ಯ ಮಾಡಲು ಸಾಧ್ಯವಾಗುತ್ತದೆ. ಹಿಂದೂ ಕಾರ್ಯಕರ್ತರ ಮನೆ ಮನೆಗೆ ತೆರಳಿ ಫೋಟೋ, ಜಿಪಿಆರ್ ಮಾಡಲಾಗಿದೆ. ಅದೇ ರೀತಿ ಎಷ್ಟೊ ಗೋಕಳ್ಳರ, ಡ್ರಗ್ಸ್ ದಂಧೆಕೋರರ ಮನೆಗೆ ಪೋಲೀಸರು ನುಗ್ಗಿದ್ದಾರೆ. ಹಟ್ಟಿಯಿಂದ ದನ ಕದ್ದು ಕೊಂದ ಆರೋಪಿಗಳನ್ನು ತಕ್ಷಣ ಬಂಧಿಸಬೇಕು. ಒಂದು ದಿನದ ಗಡುವನ್ನು ಪೊಲೀಸರಿಗೆ ನೀಡಿದ್ದೇವೆ ಪೊಲೀಸರು ಕಾರ್ಯ ಪ್ರವೃತ್ತರಾಗದಿದ್ದಲ್ಲಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.



















