ಮಧುರೈ: ತಿರುಪ್ಪರಂಕುಂಡ್ರಂ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಪುರಾತನ ‘ದೀಪತೂನ್’ ಕಂಬದ ಮೇಲೆ ಕಾರ್ತೀಕ ದೀಪ ಹಚ್ಚುವ ವಿಚಾರದಲ್ಲಿ ನ್ಯಾಯಾಲಯದ ಸ್ಪಷ್ಟ ಆದೇಶವನ್ನು ಪಾಲಿಸದ ತಮಿಳುನಾಡು ಸರ್ಕಾರ ಮತ್ತು ದೇವಾಲಯದ ಆಡಳಿತ ಮಂಡಳಿಯ ವಿರುದ್ಧ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಡಿಸೆಂಬರ್ 1ರಂದು ನೀಡಿದ್ದ ಆದೇಶದ ಹೊರತಾಗಿಯೂ, ಮಂಗಳವಾರ ಸಂಜೆ ದೇವಾಲಯದ ಆಡಳಿತ ಮಂಡಳಿಯು ಪುರಾತನ ದೀಪತೂನ್ ಕಂಬದ ಬದಲಾಗಿ, ಶತಮಾನಗಳಿಂದ ನಡೆದುಕೊಂಡು ಬಂದಿರುವ ಪದ್ಧತಿಯಂತೆ ಉಚ್ಚಿಪಿಳ್ಳೈಯಾರ್ ದೇವಾಲಯದ ಬಳಿಯಿರುವ ಸಾಂಪ್ರದಾಯಿಕ ಜಾಗದಲ್ಲೇ ದೀಪ ಹಚ್ಚಿದೆ. ಈ ಕುರಿತು ರಾಮ ರವಿಕುಮಾರ್ ಎಂಬವರು ಸಲ್ಲಿಸಿದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್, “ಇದು ಉದ್ದೇಶಪೂರ್ವಕವಾಗಿ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿದಂತಾಗಿದೆ. ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ,” ಎಂದು ಕಿಡಿಕಾರಿದ್ದಾರೆ. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಸಂಪರ್ಕಕ್ಕೆ ಸಿಗದಿರುವುದು ಮತ್ತು ದೇವಾಲಯ ಸಲ್ಲಿಸಿದ ಮೇಲ್ಮನವಿಯಲ್ಲಿ ದೋಷಗಳಿರುವುದನ್ನು ನ್ಯಾಯಾಧೀಶರು ದಾಖಲಿಸಿಕೊಂಡಿದ್ದಾರೆ.
ವಿವಾದದ ಹಿನ್ನೆಲೆ ಏನು?
ತಿರುಪ್ಪರಂಕುಂಡ್ರಂ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಬೆಟ್ಟದ ಮೇಲ್ಭಾಗದಲ್ಲಿ 14ನೇ ಶತಮಾನದ ಸುಲ್ತಾನ್ ಸಿಕಂದರ್ ಬಾದ್ಶಾ ದರ್ಗಾ ಇದ್ದು, ಅದರ ಸಮೀಪದಲ್ಲೇ ಪುರಾತನ ದೀಪತೂನ್ ಕಂಬವಿದೆ. ಶತಮಾನಗಳಿಂದ ದರ್ಗಾದಿಂದ ದೂರವಿರುವ ಕೆಳಭಾಗದ ಉಚ್ಚಿಪಿಳ್ಳೈಯಾರ್ ದೇವಾಲಯದ ಬಳಿಯೇ ದೀಪ ಹಚ್ಚಲಾಗುತ್ತಿತ್ತು. ಆದರೆ, 1923ರ ಪ್ರಿವಿ ಕೌನ್ಸಿಲ್ ತೀರ್ಪಿನ ಪ್ರಕಾರ ಬೆಟ್ಟದ ಖಾಲಿ ಜಾಗವು ದೇವಾಲಯದ ಆಸ್ತಿಯಾಗಿದೆ ಎಂದು ಉಲ್ಲೇಖಿಸಿ, ಡಿಸೆಂಬರ್ 1ರಂದು ನ್ಯಾಯಾಲಯವು ಪುರಾತನ ಕಂಬದ ಮೇಲೆಯೇ ದೀಪ ಹಚ್ಚುವಂತೆ ಆದೇಶಿಸಿತ್ತು. ಒಡೆತನದ ಹಕ್ಕನ್ನು ಪ್ರತಿಪಾದಿಸಲು ಇದು ಅಗತ್ಯ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದರು.
ರಾಜಕೀಯ ಕೆಸರೆರಚಾಟ
ಈ ಘಟನೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. “ಸನಾತನ ಧರ್ಮದ ವಿರುದ್ಧ ಡಿಎಂಕೆ ಸರ್ಕಾರದ ದ್ವೇಷ ಸ್ಪಷ್ಟವಾಗಿದೆ,” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಟೀಕಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಡಿಎಂಕೆ ವಕ್ತಾರ ಟಿ.ಕೆ.ಎಸ್. ಇಳಂಗೋವನ್, “ಬಿಜೆಪಿ ಹಿಂದೂ-ಮುಸ್ಲಿಂ ನಡುವೆ ಕಂದಕ ಸೃಷ್ಟಿಸಲು ಯತ್ನಿಸುತ್ತಿದೆ. ಇಲ್ಲಿ ಉಭಯ ಕೋಮುಗಳ ನಡುವೆ ಸೌಹಾರ್ದತೆಯಿದೆ,” ಎಂದು ತಿರುಗೇಟು ನೀಡಿದ್ದಾರೆ. ತಮಿಳುನಾಡು ಸರ್ಕಾರದ ಮೂಲಗಳು, “ನಾವು ಹಿಂದೂಗಳ ವಿರೋಧಿಯಲ್ಲ, ಆದರೆ ರಾಜಕೀಯ ಪ್ರೇರಿತ ವ್ಯಕ್ತಿಗಳಿಗಿಂತ ನಿಜವಾದ ಭಕ್ತರ ಹಿತಾಸಕ್ತಿ ನಮಗೆ ಮುಖ್ಯ,” ಎಂದು ಸ್ಪಷ್ಟಪಡಿಸಿವೆ.
ಸಿಐಎಸ್ಎಫ್ ಭದ್ರತೆಗೆ ಆದೇಶ
ನ್ಯಾಯಾಂಗ ನಿಂದನೆಯ ಹಿನ್ನೆಲೆಯಲ್ಲಿ, ಅರ್ಜಿದಾರರು ಮತ್ತು ಇತರ 10 ಮಂದಿಗೆ ಸಾಂಕೇತಿಕವಾಗಿ ಬೆಟ್ಟದ ಮೇಲಿನ ಕಂಬದ ಬಳಿ ದೀಪ ಹಚ್ಚಲು ನ್ಯಾಯಾಲಯ ಅನುಮತಿ ನೀಡಿದ್ದು, ಅವರಿಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಭದ್ರತೆ ಒದಗಿಸುವಂತೆ ಆದೇಶಿಸಿದೆ. ಆದರೆ, ರಾಜ್ಯ ಸರ್ಕಾರವು ಏಕಸದಸ್ಯ ಪೀಠದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದ ನಂತರ, ಪೊಲೀಸರು ಅರ್ಜಿದಾರರನ್ನು ತಡೆದಿದ್ದಾರೆ. ಈ ಪ್ರಕರಣದ ವಿಚಾರಣೆ ಗುರುವಾರ ಮುಂದುವರಿಯಲಿದೆ.
ಇದನ್ನೂ ಓದಿ: ಜೈಷ್ ಉಗ್ರ ಸಂಘಟನೆಗೆ ‘ಮಹಿಳಾ ಪಡೆ’ ಸೇರ್ಪಡೆ | 500 ರೂ. ಶುಲ್ಕ, ಆನ್‌ಲೈನ್ ತರಬೇತಿ ; 5,000ಕ್ಕೂ ಹೆಚ್ಚು ಮಹಿಳೆಯರ ನೇಮಕ!


















