ಬೆಂಗಳೂರು: ಅಂಚೆ ಕಚೇರಿಯ ರೆಕರಿಂಗ್ ಡೆಪಾಸಿಟ್ ನಲ್ಲೋ, ಕಿಸಾನ್ ವಿಕಾಸ್ ಪತ್ರ ಯೋಜನೆ ಅಡಿಯಲ್ಲೋ ಹೂಡಿಕೆ ಆರಂಭಿಸುತ್ತೀರಿ. ಆದರೆ, ಒಂದಷ್ಟು ದಿನ ಅಥವಾ ವರ್ಷಗಳ ಬಳಿಕ ಹೂಡಿಕೆ ಮಾಡುವುದನ್ನೇ ನಿಲ್ಲಿಸುತ್ತೀರಿ. ಹೀಗೆ ಅಶಿಸ್ತಿನಿಂದ ಹೂಡಿಕೆ ಮಾಡುವವರಿಗೆ ಇಂಡಿಯಾ ಪೋಸ್ಟ್ ಹೊಸದೊಂದು ಕ್ರಮ ಪರಿಚಯಿಸಿದೆ. ಯಾವುದೇ ಸಣ್ಣ ಉಳಿತಾಯ ಯೋಜನೆಗಳಿಗೆ ಮೂರು ವರ್ಷ ಹೂಡಿಕೆ ಮಾಡದಿದ್ದರೆ, ಅಂತಹ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗುವುದು ಎಂದು ಭಾರತೀಯ ಅಂಚೆ ಆದೇಶ ಹೊರಡಿಸಿದೆ.
ಜುಲೈ 15ರಿಂದಲೇ ಹೊಸ ಆದೇಶ ಜಾರಿಗೆ ಬಂದಿದೆ. ಮಾಸಿಕ ಆದಾಯ ಯೋಜನೆ (ಎಂಐಎಸ್), ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್ ಸಿ ಎಸ್ ಎಸ್), ಕಿಸಾನ್ ವಿಕಾಸ್ ಪತ್ರ (ಕೆವಿಪಿ), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್ ಎಸ್ ಸಿ), ರೆಕರಿಂಗ್ ಡೆಪಾಸಿಟ್ (ಆರ್ ಡಿ) ಉಳಿತಾಯ ಯೋಜನೆಗಳ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗುವುದು ಎಂದು ಇಂಡಿಯಾ ಪೋಸ್ಟ್ ತಿಳಿಸಿದೆ.
ಆದರೆ, ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಖಾತೆಗಳ ವಿಷಯದಲ್ಲಿ, ನಿಯಮವು ಮಾತ್ರ ಅವಧಿ ಮುಗಿದ ಬಳಿಕ ವಿಸ್ತರಿಸದ ಖಾತೆಗಳಿಗೆ ಅನ್ವಯವಾಗುತ್ತದೆ. ಸಾಮಾನ್ಯವಾಗಿ, ಪಿಪಿಎಫ್ ಖಾತೆ 15 ವರ್ಷಗಳ ಅವಧಿಗೆ ಇರುತ್ತದೆ ಮತ್ತು ಹೆಚ್ಚಿನವರು 5 ವರ್ಷಗಳ ಕಾಲ ಮರು ವಿಸ್ತರಣೆ ಮಾಡುವುದು ಸಾಮಾನ್ಯ. ಈ ವಿಸ್ತರಣೆ ಮಾಡದಿದ್ದರೆ, ಆ ಖಾತೆಗಳಿಗೂ ಈ ಸ್ಥಗಿತ ನಿಯಮ ಅನ್ವಯಿಸುತ್ತದೆ.
ವರ್ಷಕ್ಕೆ ಎರಡು ಬಾರಿ ಪ್ರಕ್ರಿಯೆ
ಅಂಚೆ ಇಲಾಖೆ ಈ ಪ್ರಕ್ರಿಯೆಯನ್ನು ವರ್ಷಕ್ಕೆ ಎರಡು ಬಾರಿ ಜಾರಿಗೊಳಿಸಲಿದೆ. ಪ್ರತಿಯೊಂದು ವರ್ಷದ ಜನವರಿ 1 ರಿಂದ 15ರೊಳಗೆ, ಜುಲೈ 1 ರಿಂದ 15ರೊಳಗೆ..ಈ ದಿನಾಂಕಗಳೊಳಗೆ, ಡಿಸೆಂಬರ್ 31 ಅಥವಾ ಜೂನ್ 30ಕ್ಕೆ ಮೂರು ವರ್ಷಗಳ ಅವಧಿಯನ್ನು ಪೂರೈಸಿದ ಎಲ್ಲ ಖಾತೆಗಳನ್ನು ಗುರುತಿಸಿ ಸ್ಥಗಿತಗೊಳಿಸಲಾಗುತ್ತದೆ. ಡಿಜಿಟಲ್ ತಂತ್ರಜ್ಞಾನ ಬಳಸಿ ಕ್ರಮ ತೆಗೆದುಕೊಳ್ಳಲಾಗುತ್ತದೆ.