ಬೆಂಗಳೂರು: ದೇಶಾದ್ಯಂತ ಇಂದಿನಿಂದ (ಸೆಪ್ಟೆಂಬರ್ 22) ಸರಕು ಮತ್ತು ಸೇವಾ ತೆರಿಗೆ (GST) 2.0 ಸುಧಾರಣೆ ಜಾರಿಗೆ ಬಂದಿದೆ. ಶೇ.5, 12, 18 ಹಾಗೂ 28ರ ಸ್ಲ್ಯಾಬ್ ಗಳ ಬದಲಾಗಿ, ಕೇವಲ ಶೇ.5 ಹಾಗೂ 18ರ ಸ್ಲ್ಯಾಬ್ ಗಳು ಮಾತ್ರ ಉಳಿದಿವೆ. ಇದರಿಂದಾಗಿ ನೂರಾರು ಉತ್ಪನ್ನಗಳ ಬೆಲೆಯು ಇಳಿಕೆಯಾಗಿದೆ. ಇದೇ ಕಾರಣಕ್ಕಾಗಿ ಸುಧಾರಣೆಯನ್ನು ನೆಕ್ಸ್ಟ್ ಜೆನ್ ಜಿಎಸ್ ಟಿ ಎಂದು ಕರೆಯಲಾಗುತ್ತಿದೆ. ಇದರ ಬೆನ್ನಲ್ಲೇ, ಅಂಗಡಿಗಳಲ್ಲಿ ಜಿಎಸ್ ಟಿ ದರವನ್ನು ಇಳಿಕೆ ಮಾಡದಿದ್ದರೆ ದೂರು ಸಲ್ಲಿಸಲು ಕೇಂದ್ರ ಸರ್ಕಾರ ವ್ಯವಸ್ಥೆ ಮಾಡಿದೆ.
ಹೌದು, ಅಂಗಡಿಗಳು, ಮಳಿಗೆಗಳು ಸೇರಿ ಯಾವುದೇ ಕಡೆಗಳಲ್ಲಿ ಸೋಮವಾರದಿಂದ ನೂತನ ಜಿಎಸ್ ಟಿ ಯನ್ನೇ ಅನ್ವಯಿಸಬೇಕು. ಎಲ್ಲ ಉತ್ಪನ್ನಗಳಿಗೆ ಇದು ಅನ್ವಯವಾಗುತ್ತದೆ. ಹಾಗೊಂದು ವೇಳೆ, ಯಾವುದೇ ಉತ್ಪನ್ನಗಳಿಗೆ ಹೆಚ್ಚಿನ ಜಿಎಸ್ ಟಿ ವಿಧಿಸಿದರೆ ಗ್ರಾಹಕರು ದೂರು ನೀಡಬಹುದಾಗಿದೆ. ಟೋಲ್ ಫ್ರೀ ಸಂಖ್ಯೆಯಾದ 1915ಕ್ಕೆ ಡಯಲ್ ಮಾಡುವ ಮೂಲಕ ವ್ಯಾಪಾರಿಗಳ ವಿರುದ್ಧ ದೂರು ದಾಖಲಿಸಬಹುದಾಗಿದೆ.
ಇದರ ಜತೆಗೆ ಇನ್ ಗ್ರಾಂ (INGRAM) ವೆಬ್ ಪೋರ್ಟಲ್ ಗೆ ಭೇಟಿ ನೀಡುವ ಮೂಲಕವೂ ದೂರು ದಾಖಲಿಸಲಾಗಿದೆ. ಹಾಗೆಯೇ, ಎನ್ ಸಿ ಎಚ್ ಆ್ಯಪ್, ವೆಬ್ ಪೋರ್ಟಲ್ ಮೂಲಕವೂ ದೂರು ದಾಖಲಿಸಬಹುದು. ಹಾಗೆಯೇ, ಉಮಾಂಗ್ ಆ್ಯಪ್ ಇದ್ದವರು ಕೂಡ ಅದೇ ಆ್ಯಪ್ ನಲ್ಲಿ ಜಿಎಸ್ ಟಿ ಕುರಿತ ಗೊಂದಲ, ಸಮಸ್ಯೆ, ದೂರುಗಳನ್ನು ದಾಖಲಿಸಬಹುದು ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಜಿಎಸ್ ಟಿ ಸ್ಲ್ಯಾಬ್ ಗಳ ಕಡಿತದಿಂದಾಗಿ ಕಾರು, ಬೈಕ್, ಮೊಬೈಲ್, ವಾಷಿಂಗ್ ಮೆಷಿನ್ ಸೇರಿ ಹಲವು ಉತ್ಪನ್ನಗಳ ಬೆಲೆ ಇಳಿಕೆಯಾಗಿದೆ. ಅದರಲ್ಲೂ, ಹಾಲು, ತುಪ್ಪ, ಬೆಣ್ಣೆ ಸೇರಿ ದಿನಬಳಕೆಯ ನೂರಾರು ವಸ್ತುಗಳ ಬೆಲೆಯೂ ಇಳಿದಿದೆ. ಜಿಎಸ್ ಟಿ ಜಾರಿಯಿಂದ ಕೇಂದ್ರ ಸರ್ಕಾರಕ್ಕೆ ವರ್ಷಕ್ಕೆ 48 ಸಾವಿರ ಕೋಟಿ ರೂ. ಹೊರೆಯಾಗಲಿದೆ ಎಂದು ಅಂದಾಜಿಸಲಾಗಿದೆ.