ಹಾವೇರಿ : ಕೆಲವರು ಧಾರ್ಮಿಕ ಸಂಸ್ಥೆಗಳ ಮೇಲೆ, ಹಿಂದುತ್ವಕ್ಕೆ ಕಂಟಕ ತರಬೇಕು, ಹಿಂದುತ್ವದ ಸಂಘ ಸಂಸ್ಥೆಗಳಿಗೆ, ದೇಗುಲಗಳಿಗೆ ಕೆಟ್ಟದ್ದು ಮಾಡಬೇಕೆಂದು ಪಿತೂರಿ ನಡೆಯುತ್ತಿದೆ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದ್ದಾರೆ.
ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಪರವಾಗಿ ಮಾತನಾಡಿದ ಸ್ವಾಮೀಜಿ, ವಿದೇಶಗಳಲ್ಲಿ 10 ವರ್ಷಗಳಲ್ಲಿ ಭಾರತದ ಗೌರವ ಹೆಚ್ಚಾಗಿದೆ. ಕೆಲವರಿಗೆ ಹಿಂದುತ್ವ ಬೆಳೆಯುತ್ತಿದೆ ಇಡೀ ಜಗತ್ತೇ ಹಿಂದುತ್ವ ಆಗಬಹುದು ಎಂಬ ಭಯ ಕಾಡುತ್ತಿದೆ. ಭಾರತದ ಯಾವೊಬ್ಬ ಹಿಂದೂ ಗುರುಗಳು ನಾವು ಮತಾಂತರ, ಧರ್ಮಾಂತರ ಮಾಡಲ್ಲ. ಧರ್ಮದ ತತ್ವ ಸಿದ್ದಾಂತಗಳನ್ನು ಬಿತ್ತುತ್ತಿದ್ದೇವೆ. ಧರ್ಮಸ್ಥಳ, ಶಬರಿಮಲೆ, ಇನ್ನೂ ಅನೇಕ ಆಧ್ಯಾತ್ಮ ಕ್ಷೇತ್ರಗಳು, ಗುರುಗಳ ಒಳ್ಳೆಯ ಕಾರ್ಯಗಳನ್ನು ಬಿಟ್ಟು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಅಪಖ್ಯಾತಿ ತರುವುದು, ನಕಾರಾತ್ಮಕವಾಗಿ ಬಿಂಬಿಸುವ ಕೆಲಸ ನಡೆದಿದೆ. ನಾವೆಲ್ಲಾ ಹಿಂದುಗಳು ಅವರ ಜೊತೆ ಇರಬೇಕು ಎಂದು ಹೇಳಿದ್ದಾರೆ.
ನಾವೆಲ್ಲರೂ ಒಂದಾಗಬೇಕಿದೆ. ಇಂದು ವೀರೇಂದ್ರ ಹೆಗ್ಗಡೆ, ನಾಳೆ ನಮಗೂ ಇಂತಹ ಪರಿಸ್ಥಿತಿ ಬರಬಹುದು. ತಪ್ಪಾಗಿದ್ದರೇ ಕಾನೂನು ಇದೆ. ನ್ಯಾಯಾಲಯವಿದೆ. ನಮಗೆ ನ್ಯಾಯಲವೇ ದೊಡ್ಡದು. ಅದನ್ನು ತೀರ್ಮಾನ ಮಾಡಲು ನಾವ್ಯಾರು ಎಂದಿದ್ದಾರೆ.
ಗಿರೀಶ್ ಮಟ್ಟಣ್ಣವರ ಬಗ್ಗೆ ನನಗೆ ತಿಳಿದಿಲ್ಲ. ತಿಳಿದಿಲ್ಲದವರ ಬಗ್ಗೆ ಮಾತನಾಡಬಾರದು. ನೂರಕ್ಕೆ ನೂರು ಧರ್ಮಸ್ಥಳದ ವಿರುದ್ಧ ಮೂಲಭೂತವಾದ ಪ್ರಯೋಗ ನಡೆದಿದೆ. ಅಲ್ ಜಜಿರಾ ಚಾನೆಲ್ ನಲ್ಲಿಯೂ ಸುದ್ದಿ ಬರುತ್ತದೆ ಎಂದರೇ ಯೋಚನೆ ಮಾಡಲೇಬೇಕು. ಇದರ ಹಿಂದೆ ಯಾರ ಷಡ್ಯಂತ್ರ ನಡೆಯುತ್ತಿದೆ? ಯಾರು ಫಂಡ್ ಮಾಡುತ್ತಿದ್ದಾರೆ ? ಅಖಂಡ ಸನಾತನ ತತ್ವಗಳ ವಿರುದ್ಧ ಮೂಲಭೂತವಾದ ಬೆಂಬಲಿಸುವ ಯೂಟೂಬರ್ಸ್ ಗಳನ್ನು ನಿರ್ಲಕ್ಷ್ಯ ಮಾಡಬೇಕಿದೆ ಎಂದು ಹೇಳಿದರು.