ನವದೆಹಲಿ: ಕೇಂದ್ರ ಸರ್ಕಾರವು ಜಿಎಸ್‌ಟಿ ವ್ಯವಸ್ಥೆಯಲ್ಲಿ ಮಾಡಿರುವ ಮಹತ್ವದ ಬದಲಾವಣೆಗಳಿಗೆ ಪ್ರತಿಪಕ್ಷಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾಲ್ಕು ತೆರಿಗೆ ಸ್ಲ್ಯಾಬ್‌ಗಳನ್ನು ಎರಡಕ್ಕೆ ಇಳಿಸಿರುವುದನ್ನು “ತಡವಾಗಿ ತೆಗೆದುಕೊಂಡ ಕ್ರಮ” ಎಂದು ಕಾಂಗ್ರೆಸ್ ಟೀಕಿಸಿದ್ದರೆ, ಇತರ ಕೆಲವು ಪಕ್ಷಗಳು ಇದನ್ನು ಎಚ್ಚರಿಕೆಯಿಂದ ಸ್ವಾಗತಿಸಿವೆ.
‘ಒಂದು ರಾಷ್ಟ್ರ, 9 ತೆರಿಗೆ’: ಕಾಂಗ್ರೆಸ್ ವಾಗ್ದಾಳಿ
ಜಿಎಸ್‌ಟಿ ಸುಧಾರಣೆಯನ್ನು ಕಾಂಗ್ರೆಸ್ ಕಟುವಾಗಿ ಟೀಕಿಸಿದೆ. ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, “ಒಂದು ರಾಷ್ಟ್ರ, ಒಂದು ತೆರಿಗೆ ಎಂಬ ಘೋಷಣೆಯನ್ನು ಮೋದಿ ಸರ್ಕಾರ ‘ಒಂದು ರಾಷ್ಟ್ರ, 9 ತೆರಿಗೆ’ಯಾಗಿ ಬದಲಾಯಿಸಿದೆ” ಎಂದು ಆರೋಪಿಸಿದ್ದಾರೆ. ಶೇ.0, 5, 12, 18, 28 ಜೊತೆಗೆ ಶೇ.0.25, 1.5, 3, ಮತ್ತು 6 ರ ವಿಶೇಷ ದರಗಳನ್ನು ಉಲ್ಲೇಖಿಸಿ, ವ್ಯವಸ್ಥೆಯು ಇನ್ನೂ ಜಟಿಲವಾಗಿದೆ ಎಂದು ಅವರು ಹೇಳಿದ್ದಾರೆ.
ಜಿಎಸ್‌ಟಿ ವ್ಯವಸ್ಥೆಯಲ್ಲಿನ ಸುಧಾರಣೆಗಳ ಕುರಿತು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಸಾಮಾನ್ಯ ಜನರಿಂದ ತೆರಿಗೆ ವಸೂಲಿ ಮಾಡುವುದೇ ದೊಡ್ಡ ಸಾಧನೆ ಎಂಬಂತೆ ಬಿಜೆಪಿ ಸರ್ಕಾರ ಜಿಎಸ್‌ಟಿ ಸಂಗ್ರಹವನ್ನು ಸಂಭ್ರಮಿಸುತ್ತಿದೆ” ಎಂದು ವ್ಯಂಗ್ಯವಾಡಿದ್ದಾರೆ.
“ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ರೈತರನ್ನು ತೆರಿಗೆ ವ್ಯಾಪ್ತಿಗೆ ತಂದಿದ್ದು ಮೋದಿ ಸರ್ಕಾರ. ಕೃಷಿ ಕ್ಷೇತ್ರದ 36ಕ್ಕೂ ಹೆಚ್ಚು ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸಲಾಗಿದೆ. ಹಾಲು, ಮೊಸರು, ಹಿಟ್ಟು, ಧಾನ್ಯಗಳಂತಹ ದೈನಂದಿನ ಅಗತ್ಯ ವಸ್ತುಗಳ ಜೊತೆಗೆ, ಮಕ್ಕಳ ಪೆನ್ಸಿಲ್, ಪುಸ್ತಕ, ಆಮ್ಲಜನಕ, ವಿಮೆ ಮತ್ತು ಆಸ್ಪತ್ರೆ ವೆಚ್ಚಗಳ ಮೇಲೂ ಜಿಎಸ್‌ಟಿ ಹಾಕಲಾಗಿದೆ,” ಎಂದು ಆರೋಪಿಸಿದರು. ಇದೇ ಕಾರಣಕ್ಕೆ ಕಾಂಗ್ರೆಸ್ ಇದನ್ನು ‘ಗಬ್ಬರ್ ಸಿಂಗ್ ಟ್ಯಾಕ್ಸ್’ ಎಂದು ಕರೆಯಿತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ತೆರಿಗೆ ದರಗಳ ಬದಲಾವಣೆಯಿಂದ ರಾಜ್ಯಗಳಿಗೆ ಆಗುವ ಆದಾಯ ನಷ್ಟವನ್ನು ಸರಿದೂಗಿಸಲು, 2024-25ನೇ ಸಾಲನ್ನು ಮೂಲ ವರ್ಷವನ್ನಾಗಿ ಪರಿಗಣಿಸಿ, ಮುಂದಿನ 5 ವರ್ಷಗಳ ಕಾಲ ಎಲ್ಲಾ ರಾಜ್ಯಗಳಿಗೆ ಪರಿಹಾರ ನೀಡಬೇಕೆಂದೂ ಖರ್ಗೆ ಒತ್ತಾಯಿಸಿದ್ದಾರೆ.
ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ, ಈ ಬದಲಾವಣೆಗಳು “ಎಂಟು ವರ್ಷ ತಡವಾಗಿ ಬಂದಿವೆ” ಎಂದು ಹೇಳಿದ್ದಾರೆ. “ಕುಂಠಿತಗೊಂಡ ಆರ್ಥಿಕತೆ, ಹೆಚ್ಚುತ್ತಿರುವ ಸಾಲ ಮತ್ತು ಬಿಹಾರದಂತಹ ರಾಜ್ಯಗಳಲ್ಲಿನ ಚುನಾವಣೆಗಳು ಸರ್ಕಾರದ ಈ ನಿರ್ಧಾರದ ಹಿಂದಿನ ಕಾರಣಗಳಾಗಿರಬಹುದು” ಎಂದು ಅವರು ಊಹಿಸಿದ್ದಾರೆ. ಕಾಂಗ್ರೆಸ್ ಈ ಸುಧಾರಣೆಯನ್ನು ‘ಜಿಎಸ್‌ಟಿ 1.5’ ಎಂದು ಕರೆದಿದ್ದು, ಇದು ಎಂಎಸ್ಎಂಇ ಮತ್ತು ಜನಸಾಮಾನ್ಯರ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ ಎಂದು ಹೇಳಿದೆ.
ಇತರೆ ಪಕ್ಷಗಳ ಪ್ರತಿಕ್ರಿಯೆ
ಶಿವಸೇನೆ (ಯುಬಿಟಿ): ಸಂಸದೆ ಪ್ರಿಯಾಂಕಾ ಚತುರ್ವೇದಿ ಮಾತನಾಡಿ, “ಬಹುಕಾಲದಿಂದ ಬಾಕಿಯಿದ್ದ ಈ ತಿದ್ದುಪಡಿಯನ್ನು ಸ್ವಾಗತಿಸುತ್ತೇವೆ. ಜಿಎಸ್‌ಟಿ ನಿಜವಾಗಿಯೂ ಭಾರತೀಯರಿಗಾಗಿ ಕೆಲಸ ಮಾಡುವ ಸಮಯ ಬಂದಿದೆ” ಎಂದಿದ್ದಾರೆ.
ಡಿಎಂಕೆ: ತಮಿಳುನಾಡು ಸರ್ಕಾರವು ತೆರಿಗೆ ದರ ಕಡಿತದಿಂದ ರಾಜ್ಯಗಳ ಆದಾಯಕ್ಕೆ ಸಂಭಾವ್ಯ ನಷ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ತೃಣಮೂಲ ಕಾಂಗ್ರೆಸ್ (ಟಿಎಂಸಿ): ಜೀವ ಮತ್ತು ಆರೋಗ್ಯ ವಿಮೆ ಮೇಲಿನ ಜಿಎಸ್‌ಟಿ ರದ್ದುಗೊಳಿಸಿದ್ದು ತಮ್ಮ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಒತ್ತಡದ ಫಲ ಎಂದು ಟಿಎಂಸಿ ಹೇಳಿಕೊಂಡಿದೆ.
ಸರ್ಕಾರದ ಸಮರ್ಥನೆ
ವಿರೋಧ ಪಕ್ಷಗಳ ಟೀಕೆಗಳಿಗೆ ಪ್ರತಿಕ್ರಿಯಿಸಿರುವ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, “ಈ ಬದಲಾವಣೆಗಳು ‘ಸಮಯದ ಅವಶ್ಯಕತೆ’ ಆಗಿದ್ದವು. ವ್ಯಾಪಾರವನ್ನು ಸುಲಭಗೊಳಿಸುವುದು ಮತ್ತು ನಾಗರಿಕರಿಗೆ ಪರಿಹಾರ ನೀಡುವುದು ಇದರ ಉದ್ದೇಶ” ಎಂದು ಹೇಳಿದ್ದಾರೆ. “ಶಿಕ್ಷಣ, ಆರೋಗ್ಯ, ರೈತರು ಮತ್ತು ಮಧ್ಯಮ ವರ್ಗದವರಿಗೆ ಇದರಿಂದ ಅನುಕೂಲವಾಗಲಿದೆ,” ಎಂದು ಅವರು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ಬಿಜೆಪಿಯ ಮಿತ್ರಪಕ್ಷಗಳಾದ ಜೆಡಿಯು ಮತ್ತು ಟಿಡಿಪಿ ಕೂಡ ಈ ಕ್ರಮವನ್ನು ಸ್ವಾಗತಿಸಿದ್ದು, ಇದು “ಹಬ್ಬದ ಋತುವಿನ ಬಂಪರ್ ಗಿಫ್ಟ್” ಮತ್ತು “ಬಡವರ ಪರವಾದ, ಬೆಳವಣಿಗೆಗೆ ಪೂರಕವಾದ ನಿರ್ಧಾರ” ಎಂದು ಬಣ್ಣಿಸಿವೆ.