ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಕೊನೆಗೂ ಭಾರತ ಹಾಕಿ ತಂಡ ಕಂಚು ಗೆದ್ದು ಬೀಗಿದೆ. ಕಳೆದ ಬಾರಿಯ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಕೂಡ ಭಾರತ ತಂಡ ಕಂಚಿಗೆ ಕೊರಳೊಡ್ಡಿತ್ತು. ಈ ಬಾರಿಯೂ ಕಂಚು ಗೆದ್ದಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ನಾಯಕರು ಹಾಗೂ ಇಡೀ ಭಾರತ ಅಭಿನಂದನೆ ಸಲ್ಲಿಸುತ್ತಿದೆ.
ಈ ಮೂಲಕ ಭಾರತದ ಖಾತೆಗೆ ನಾಲ್ಕನೇ ಪದಕ ಬಂದು ಬಿದ್ದಿದೆ. ಕಂಚಿನ ಪದಕದ ಪಂದ್ಯದಲ್ಲಿ ಭಾರತ ಹಾಕಿ ತಂಡವು ಸ್ಪೇನ್ ವಿರುದ್ಧ 2-1 ಅಂತರದ ಗೆಲುವು ಸಾಧಿಸುವ ಮೂಲಕ ಸತತ ಎರಡನೇ ಒಲಿಂಪಿಕ್ಸ್ ಪದಕ ಗೆದ್ದುಕೊಂಡಿದೆ. ಕಂಚು ಗೆಲ್ಲುವ ಮೂಲಕ ಭಾರತ ತಂಡ ಸತತವಾಗಿ ಎರಡನೇ ಬಾರಿಗೆ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿದೆ. ಈ ಗೆಲುವಿನೊಂದಿಗೆ ಭಾರತದಲ್ಲಿ ಸಂಭ್ರಮ ಮನೆ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಕೂಡ ಹಾಕಿ ತಂಡದ ಗೆಲುವಿಗೆ ಸಂತಸ ವ್ಯಕ್ತಪಡಿಸಿದ್ದು, ಇದು ಭಾರತಕ್ಕೆ ಸಂದ ಜಯ ಎಂದು ಟ್ವೀಟ್ ಮಾಡಿ, ತಂಡದ ಪ್ರಯತ್ನವನ್ನು ಹಾಡಿ ಹೊಗಳಿದ್ದಾರೆ.
ಎಕ್ಸ್ ಖಾತೆಯಲ್ಲಿ ಭಾರತ ಹಾಕಿ ತಂಡದ ಸಾಧನೆಯನ್ನು ಶ್ಲಾಘಿಸಿರುವ ಮೋದಿ, ಭಾರತದ ಹಾಕಿ ತಂಡವು ಒಲಿಂಪಿಕ್ಸ್ ನಲ್ಲಿ ಅದ್ಭುತ ಪ್ರದರ್ಶನ ನೀಡಿ ಕಂಚಿನ ಪದಕವನ್ನು ಗೆದ್ದಿದೆ! ಇದು ಇನ್ನಷ್ಟು ವಿಶೇಷವಾಗಿದೆ. ಇದು ಒಲಿಂಪಿಕ್ಸ್‌ನಲ್ಲಿ ಸತತ ಎರಡನೇ ಪದಕವಾಗಿದೆ. ಈ ಯಶಸ್ಸು ಅವರ ಕೌಶಲ್ಯ, ಪರಿಶ್ರಮ ಮತ್ತು ಸಾಂಘಿಕ ಮನೋಭಾವದ ವಿಜಯವಾಗಿದೆ. ತಂಡವು ಅಪಾರ ತಾಳ್ಮೆ ಮತ್ತು ದೃಢತೆಯನ್ನು ತೋರಿಸಿದೆ. ಪ್ರತಿಯೊಬ್ಬ ಭಾರತೀಯನು ಹಾಕಿಯೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದಾನೆ. ಈ ಸಾಧನೆಯು ನಮ್ಮ ದೇಶದ ಯುವಕರಲ್ಲಿ ಆಟವನ್ನು ಇನ್ನಷ್ಟು ಜನಪ್ರಿಯಗೊಳಿಸಲಿದೆ ಎಂದು ಬರೆದುಕೊಂಡಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ನಮ್ಮ ಹಾಕಿ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಐದು ದಶಕಗಳ ನಂತರ, ಭಾರತ ಸತತ ಎರಡು ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಕಂಚಿನ ಪದಕಗಳನ್ನು ಗೆದ್ದಿದೆ. ಭಾರತೀಯ ಹಾಕಿಯ ಪುನಶ್ಚೇತನಕ್ಕಾಗಿ ತಂಡವು ಪ್ರಶಂಸೆಗೆ ಅರ್ಹವಾಗಿದೆ. ತಂಡ ಭಾರತಕ್ಕೆ ಹೆಮ್ಮೆ ತಂದಿದೆ. ಈ ತಂಡವು ತೋರಿದ ಸ್ಥಿರತೆ, ಕೌಶಲ್ಯ, ಒಗ್ಗಟ್ಟು ಹಾಗೂ ಹೋರಾಟದ ಮನೋಭಾವವು ನಮ್ಮ ಯುವಕರನ್ನು ಪ್ರೇರೇಪಿಸುತ್ತದೆ. ಅತ್ಯುತ್ತಮ ಭಾರತೀಯ ಹಾಕಿ ತಂಡ ಎಂದು ಖುಷಿ ಹಂಚಿಕೊಂಡಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಭಾರತ ಹಾಕಿ ತಂಡದಗೆಲುವಿಗೆ ಅಭಿನಂದನೆ ಸಲ್ಲಿಸಿದ್ದು, ‘ತಂಡ ಕಂಚಿನ ಪದಕ ಗೆದ್ದಿರುವುದನ್ನು ಕಂಡು ಹೆಮ್ಮೆ ಎನಿಸುತ್ತಿದೆ ಎಂದು ಹೇಳಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಗಣ್ಯರು ಹಾಕಿ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.