ನವದೆಹಲಿ: ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಬರೋಬ್ಬರಿ 17 ವರ್ಷಗಳ ನಂರ ಟಿ20 ವಿಶ್ವಕಪ್ (T20 World Cup) ಗೆದ್ದ ಭಾರತ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅಭಿನಂದನೆ ಸಲ್ಲಿಸಿದ್ದಾರೆ.
ಚಾಂಪಿಯನ್ಸ್! ನಮ್ಮ ತಂಡವು T20 ವಿಶ್ವಕಪ್ ಅನ್ನು ಸ್ಟೈಲ್ ನಲ್ಲಿ ಮನೆಗೆ ತಂದಿದೆ. ಭಾರತ ಕ್ರಿಕೆಟ್ ತಂಡದ ಕುರಿತು ನಮಗೆ ಹೆಮ್ಮೆ ಇದೆ ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಹಾಕಿ ಶುಭಾಶಯ ಕೋರಿದ್ದಾರೆ. ಜೊತೆಗೆ ವೀಡಿಯೋ ಸಂದೇಶ ಕೂಡ ಹಂಚಿಕೊಂಡಿದ್ದಾರೆ.
ಇಂಡಿಯಾ ವಿಶ್ವಕಪ್ ಅಷ್ಟೇ ಅಲ್ಲ, ಕೋಟ್ಯಂತರ ಭಾರತೀಯರ ಹೃದಯವನ್ನೂ ಗೆದ್ದಿದೆ. ಒಂದೇ ಒಂದು ಪಂದ್ಯವನ್ನು ಸೋಲದಿರುವುದು ಸಣ್ಣ ಸಾಧನೆಯಲ್ಲ ಎಂದು ಪ್ರಧಾನಿ ಬಣ್ಣಿಸಿದ್ದಾರೆ.
ಈ ಅದ್ಭುತ ಗೆಲುವಿಗಾಗಿ ಭಾರತಕ್ಕೆ ಅಭಿನಂದನೆಗಳು. 140 ಕೋಟಿ ದೇಶವಾಸಿಗಳು ನಿಮ್ಮ ಅದ್ಭುತ ಪ್ರದರ್ಶನದ ಬಗ್ಗೆ ಹೆಮ್ಮೆಪಡುತ್ತಾರೆ. ನೀವು ವಿಶ್ವಕಪ್ ಗೆದ್ದಿದ್ದೀರಿ ಮತ್ತು ಕೋಟ್ಯಂತರ ಭಾರತೀಯರ ಹೃದಯವನ್ನೂ ಗೆದ್ದಿದ್ದೀರಿ. ನೀವು ಒಂದು ಪಂದ್ಯವನ್ನೂ ಸೋತಿಲ್ಲ. ಅದು ಸಣ್ಣ ಸಾಧನೆಯಲ್ಲ. ನೀವು ಅದ್ಭುತ ವಿಜಯವನ್ನು ಸಾಧಿಸಿದ್ದೀರಿ. ನಾನು ನಿಮ್ಮನ್ನು ಅಭಿನಂದಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಎಂದಿಗೂ ಬತ್ತದ ಉತ್ಸಾಹದಿಂದ, ತಂಡವು ಕಠಿಣ ಪರಿಸ್ಥಿತಿಗಳಲ್ಲಿ ಸಾಗಿತು. ಪಂದ್ಯಾವಳಿಯುದ್ದಕ್ಕೂ ಅತ್ಯುತ್ತಮ ಕೌಶಲ್ಯವನ್ನು ಪ್ರದರ್ಶಿಸಿತು. ಫೈನಲ್ ಪಂದ್ಯದಲ್ಲಿ ಅಸಾಧಾರಣ ಗೆಲುವು. ಟೀಮ್ ಇಂಡಿಯಾ! ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಬರೆದುಕೊಂಡಿದ್ದಾರೆ..
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ರೋಹಿತ್ ಶರ್ಮಾ ಅವರ ನಾಯಕತ್ವವನ್ನು ಶ್ಲಾಘಿಸಿದ್ದಾರೆ. ಅದ್ಭುತ ವಿಶ್ವಕಪ್ ವಿಜಯ ಮತ್ತು ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ ಟೀಂ ಇಂಡಿಯಾಗೆ ಅಭಿನಂದನೆಗಳು! ಸೂರ್ಯ, ಎಂತಹ ಅದ್ಭುತ ಕ್ಯಾಚ್! ರೋಹಿತ್, ಈ ಗೆಲುವು ನಿಮ್ಮ ನಾಯಕತ್ವಕ್ಕೆ ಸಾಕ್ಷಿಯಾಗಿದೆ. ರಾಹುಲ್, ಟೀಮ್ ಇಂಡಿಯಾ ನಿಮ್ಮ ಮಾರ್ಗದರ್ಶನ ಕಳೆದುಕೊಳ್ಳುತ್ತದೆ ಎಂದು ನನಗೆ ತಿಳಿದಿದೆ. ಅದ್ಭುತ ಮೆನ್ ಇನ್ ಬ್ಲ್ಯೂ ನಮ್ಮ ದೇಶ ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದು ಹಾಡಿ ಹೊಗಳಿದ್ದಾರೆ.
ಫೈನಲ್ ನಲ್ಲಿ ಭಾರತ ತಂಡವು 7 ರನ್ ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಟ್ರೋಫಿಗೆ ಮುತ್ತಿಕ್ಕಿದೆ.