ಮುಂಬಯಿ : ಮಹಾರಾಷ್ಟ್ರ ಚುನಾವಣೆಗೆ ಭರ್ಜರಿ ತಯಾರಿ ನಡೆಯುತ್ತಿವೆ. ಎರಡೆರಡು ಬಣಗಳ ಎರಡು ಪಕ್ಷ ಹಾಗೂ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಚುನಾವಣೆಗೆ ತಂತ್ರ- ಪ್ರತಿತಂತ್ರ ಹೆಣೆಯುತ್ತಿವೆ. ಈ ಮಧ್ಯೆ ಬಣಗಳ ಟಿಕೆಟ್ ಹಂಚಿಕೆ ಕಾರ್ಯ ನಡೆಯುತ್ತಿದ್ದು, ಮಹಾವಿಕಾಸ್ ಆಘಾಡಿಯ ಸೀಟು ಹಂಚಿಕೆ ಗೊಂದಲ ಮಾತ್ರ ಇನ್ನೂ ಬಗೆಹರಿಯುತ್ತಿಲ್ಲ.
ರಾಜ್ಯದ 288 ಸ್ಥಾನಗಳ ಪೈಕಿ, ಕಾಂಗ್ರೆಸ್ – ಶಿವಸೇನೆ (ಠಾಕ್ರೆ ಬಣ) – ಎನ್ ಸಿಪಿ (ಶರದ್ ಪವಾರ್ ಬಣ) ಗಳ ಮಧ್ಯೆ ಸೀಟು ಹಂಚಿಕೆಯ ಗುದ್ದಾಟ ಇನ್ನೂ ಮುಗಿಯುತ್ತಿಲ್ಲ. ಈ ಮಧ್ಯೆ ಶಿವಸೇನೆಯು ಕಾಂಗ್ರೆಸ್ ಬಗ್ಗೆ ಕೆಂಡಾಮಂಡಲವಾಗಿದೆ. ಮುಂದಿನ ಸೀಟು ಹಂಚಿಕೆಯ ಮಾತುಕತೆಗೆ ಮಹಾರಾಷ್ಟ್ರ ಕಾಂಗ್ರೆಸ್ ಘಟಕದ ಅಧ್ಯಕ್ಷ ನಾನಾ ಪಟೋಲೆ ಅವರನ್ನು ಹೊರಗಿಟ್ಟು ಬನ್ನಿ ಎಂದು ಶಿವಸೇನೆಯ ಸಂಜಯ್ ರಾವತ್ ಷರತ್ತು ವಿಧಿಸಿದ್ದಾರೆ. ಅಷ್ಟರ ಮಟ್ಟಿಗೆ ಗುದ್ದಾಟ ಶುರುವಾಗಿದೆ.
ಈ ವೇಳೆ ಮಾತನಾಡಿರುವ ಅಧ್ಯಕ್ಷ ಪಟೋಲೆ, ಶರದ್ ಪವಾರ್ ಮತ್ತು ಉದ್ದವ್ ಠಾಕ್ರೆ ಜೊತೆ ಮಾತುಕತೆ ನಡೆಸಿ, ಗೊಂದಲವಿಲ್ಲದೇ ಚುನಾವಣೆ ಎದುರಿಸುತ್ತೇವೆ. ಅದಕ್ಕೂ ಮುಂಚಿನ ಸಮಸ್ಯೆಯನ್ನೂ ಬಗೆಹರಿಸುತ್ತೇವೆ ಎಂದಿದ್ದಾರೆ.
ರಾಜ್ಯದ 288 ಸ್ಥಾನಗಳ ಪೈಕಿ ಈಗಾಗಲೇ 96 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಅಂತಿಮವಾಗಿದೆ. ಪವಾರ್ ಮತ್ತು ಠಾಕ್ರೆಯವರ ಜೊತೆಗೆ ನಾಳೆ ಮಾತುಕತೆ ನಡೆಸಲಿದ್ದೇವೆ. 30 : 40 ಅನುಪಾತದಲ್ಲಿ ಸೀಟ್ ಹಂಚಿಕೆಯ ಬಗ್ಗೆ ವಿವರಣೆಯನ್ನು ನೀಡಲಿದ್ದೇವೆ. ನಮ್ಮ ಮೈತ್ರಿಕೂಟದಲ್ಲಿ ಯಾವುದೇ ಗೊಂದಲವಿಲ್ಲ” ಎಂದು ನಾನಾ ಪಟೋಲೆ ಹೇಳಿದ್ದಾರೆ.
ವಿದರ್ಭ ಭಾಗದ ಏಳೆಂಟು ಕ್ಷೇತ್ರಗಳ ಟಿಕೆಟ್ ಹಂಚಿಕೆಯ ಗೊಂದಲವಿದೆ. 288 ಸ್ಥಾನದಲ್ಲಿ ಜೊತೆಯಾಗಿ ಸ್ಪರ್ಧಿಸುತ್ತಿರುವುದರಿಂದ ಕೆಲವೊಂದು ಸಮಸ್ಯೆಗಳು ಸ್ವಾಭಾವಿಕ ಎಂದು ವಿಪಕ್ಷದ ನಾಯಕ ವಿಜಯ್ ವಾಡೆಟ್ಟಿವಾರ್ ಹೇಳಿದ್ದಾರೆ.
ಹೀಗಾಗಿಯೇ ಎಐಸಿಸಿ ಉಸ್ತುವಾರಿ ರಮೇಶ್ ಚೆನ್ನಿತ್ತಲ ಮುಂಬೈಗೆ ತೆರಳಿದ್ದಾರೆ. ಮಹಾರಾಷ್ಟ್ರ ಚುನಾವಣೆಯ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಇಂದು ಕಾಂಗ್ರೆಸ್ಸಿನ ಕೇಂದ್ರೀಯ ಇಲೆಕ್ಷನ್ ಕಮಿಟಿಯ ಸಭೆ ನಡೆದಿದೆ. ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್, ನಾನಾ ಪಟೋಲೆ ಸಭೆಯಲ್ಲಿ ಹಾಜರಿದ್ದರು.