ವಿಶ್ವ ವಿಖ್ಯಾತ ತಿರುಪತಿ ತಿಮ್ಮಪ್ಪ ದೇವಸ್ಥಾನದ ಬಳಿ ಬುಧವಾರ ರಾತ್ರಿ ಸಂಭವಿಸಿದ ಕಾಲ್ತುಳಿತದಲ್ಲಿ ಹಲವು ಭಕ್ತರು ಮೃತಪಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ ಕಂಬನಿ ಮಿಡಿದಿದ್ದಾರೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಅವರು, ಅಗತ್ಯ ನೆರವಿನ ಭರವಸೆ ಕೊಟ್ಟಿದ್ದಾರೆ.
ಘಟನೆ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಆಘಾತ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ವೈಕುಂಠದ ದ್ವಾರದ ಮೂಲಕ ತಿರುಮಲದಲ್ಲಿ ವೆಂಕಟೇಶ್ವರನ ದರ್ಶನಕ್ಕಾಗಿ ಟಿಟಿಡಿ ವಿವಿಧ ಸ್ಥಳಗಳಲ್ಲಿ ಟಿಕೆಟ್ ಕೌಂಟರ್ ಸ್ಥಾಪಿಸಿತ್ತು. ಈ ಟಿಕೆಟ್ ಪಡೆಯಲು ಹೆಚ್ಚಿನ ಭಕ್ತರು ಬಂದ ಬಳಿಕ ಉಂಟಾದ ನೂಕು ನುಗ್ಗಲಿನಲ್ಲಿ ಅವಘಡ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ಘಟನೆ ದುರದೃಷ್ಟಕರ:
“ತಿರುಪತಿಯಲ್ಲಿ ನಡೆದ ಕಾಲ್ತುಳಿತ ದುರದೃಷ್ಟಕರ. ಪ್ರಾಣ ಕಳೆದುಕೊಂಡವರಿಗೆ ನನ್ನ ಸಂತಾಪಗಳು. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಘಟನೆಯ ಎಲ್ಲ ಸಂತ್ರಸ್ತರಿಗೆ ಆಂಧ್ರಪ್ರದೇಶ ಸರ್ಕಾರ ಸಾಧ್ಯವಿರುವ ಎಲ್ಲ ಸಹಾಯ ಒದಗಿಸುತ್ತಿದೆ” ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಗಾಯಾಳುಗಳು ಶೀಘ್ರ ಗುಣಮುಖರಾಗಲಿ
“ತಿರುಪತಿಯಲ್ಲಿ ನಡೆದ ಕಾಲ್ತುಳಿತ ಘಟನೆ ನನಗೆ ದುಃಖ ತಂದಿದೆ. ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ನನ್ನ ಸಂತಾಪಗಳು. ಪ್ರಾಣ ಕಳೆದುಕೊಂಡ ಭಕ್ತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. – ಕೇಂದ್ರ ಸಚಿವ ಅಮಿತ್ ಶಾ ಅವರು ಶಾ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿದರು.
ರಾಹುಲ್ ಗಾಂಧಿ ನೆರವಿಗೆ ಕರೆ
ಆಂಧ್ರಪ್ರದೇಶದ ತಿರುಪತಿ ದೇವಸ್ಥಾನದಲ್ಲಿ ಕಾಲ್ತುಳಿತವು ತೀವ್ರ ದುಃಖಕರ ವಿಚಾರ ಎಂದು ಪ್ರತಿಪಕ್ಷಗಳ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಈ ಕಷ್ಟದ ಸಮಯದಲ್ಲಿ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಅವರು ಕರೆ ಕೊಟ್ಟಿದ್ದಾರೆ.
“ತಿರುಪತಿಯಲ್ಲಿ ಸಂಭವಿಸಿದ ದುರಂತ ಕಾಲ್ತುಳಿತವು ತೀವ್ರ ದುಃಖಕರವಾಗಿದೆ. ದುಃಖಿತ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ಗಾಯಗೊಂಡವರೆಲ್ಲರೂ ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ” ಎಂದು ರಾಹುಲ್ ಗಾಂಧಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಈ ಕಷ್ಟದ ಸಮಯದಲ್ಲಿ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವಂತೆ ನಾನು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರಿಗೆ ಮನವಿ ಮಾಡುತ್ತೇನೆ ” ಎಂದು ಅವರು ಹೇಳಿದ್ದಾರೆ.
ಮೃತರಲ್ಲಿ ಕರ್ನಾಟಕದವೂ ಇದ್ದಾರೆ
ಕಾಲ್ತುಳಿತದಲ್ಲಿ ಒಟ್ಟು ಐದು ಜನರು ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶದಿಂದ ಮೂವರು, ಕರ್ನಾಟಕ ಮತ್ತು ತಮಿಳುನಾಡಿನಿಂದ ಇಬ್ಬರು ಭಕ್ತರು ಆಗಮಿಸಿದ್ದಾರೆ. ಮೃತರನ್ನು ಆಂಧ್ರಪ್ರದೇಶದ ನರಸೀಪಟ್ಟಣಂನ ಬುಡ್ಡೇಟಿ ನಾಯ್ಡು ಬಾಬು (51), ವಿಶಾಖಪಟ್ಟಣಂನ ರಜನಿ (47), ಲಾವಣ್ಯ (40) ಮತ್ತು ಶಾಂತಿ (34), ಕರ್ನಾಟಕದ ಬಳ್ಳಾರಿಯ ನಿರ್ಮಲಾ (50) ಮತ್ತು ತಮಿಳುನಾಡಿನ ಸೇಲಂನ ಮಲ್ಲಿಕಾ (49) ಎಂದು ಗುರುತಿಸಲಾಗಿದೆ.