ಕೊಪ್ಪಳ: ಅಂಗನವಾಡಿ (Anganwadi) ಕಟ್ಟಡದ ಮೇಲ್ಚಾವಣಿಯ ಕಾಂಕ್ರೀಟ್ ಉದುರಿ ಬಿದ್ದ ಪರಿಣಾಮ ನಾಲ್ವರು ಮಕ್ಕಳು (Children) ಗಾಯಗೊಂಡಿರುವ ಘಟನೆ ನಡೆದಿದೆ.
ಈ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಮೆಹಬೂಬ್ ನಗರದಲ್ಲಿ ನಡೆದಿದೆ. ಸೋಮವಾರ ಬೆಳಗ್ಗೆ ಈ ಘಟನೆ ನಡೆದಿದೆ. ಅಂಗನವಾಡಿಯಲ್ಲಿ ಸುಮಾರು 20ಕ್ಕೂ ಅಧಿಕ ಮಕ್ಕಳು ಇದ್ದರು. ಈ ವೇಳೆ ದಿಢೀರ್ ಕಾಂಕ್ರೀಟ್ ಉದುರಿ ಬಿದ್ದಿದೆ. ಇದರಿಂದ ನಾಲ್ಕು ಮಕ್ಕಳ ತಲೆ ಮತ್ತು ಕಾಲುಗಳಿಗೆ ಗಾಯವಾಗಿವೆ. ಅಮನ್, ಮನ್ವಿತ್, ಮರ್ದನ್, ಸುರಕ್ಷಾ ಎಂಬ ಮಕ್ಕಳು ಗಾಯಗೊಂಡಿದ್ದಾರೆ.
ಕೂಡಲೇ ಮಕ್ಕಳನ್ನು ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ನಗರರಸಭೆ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕಟ್ಟಡ ನಿರ್ಮಿಸಿ ಕೇವಲ 7 ವರ್ಷಗಳಾಗಿವೆ. ಇಷ್ಟರಲ್ಲಿಯೇ ಇಂತಹ ಅವಾಂತರ ನಡೆದಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.